ಇತ್ತೀಚೆಗೆ ಅರುಣಾಚಲ ಕಾಂಗ್ರೆಸ್ ಕಮಿಟಿ ಪತ್ರಿಕಾಗೋಷ್ಠಿ ಕರೆದು ಒಂದು ಹೇಳಿಕೆ ನೀಡಿದೆ. ಬಿಜೆಪಿ ಅರುಣಾಚಲ ಪ್ರದೇಶವನ್ನು ಹಿಂದೂ ರಾಜ್ಯವನ್ನಾಗಿ ಪರಿವರ್ತಿಸುತ್ತಿದೆ ಎಂದು ಒಂದು ಹಾರಿಕೆ ಆರೋಪ ಮಾಡಿ ಕಾಂಗ್ರೆಸ್ ಹಾರಿ ಹೋಗಿತ್ತು. ಇದಕ್ಕೆ ಮೂರು ದಿನಗಳ ನಂತರ ಉತ್ತರಿಸಿದ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, – ‘ಹಿಂದೂಗಳು ಮತಾಂತರ ಮಾಡುವುದಿಲ್ಲ, ಅದಕ್ಕಾಗಿ ಅವರ ಜನಸಂಖ್ಯೆ ಕುಸಿಯುತ್ತಿದೆ. ಭಾರತದಲ್ಲಿ ಅಲ್ಪಸಂಖ್ಯಾತರೇ ರಾರಾಜಿಸುತ್ತಿದ್ದಾರೆ.’ ಎಂದರು.
ಇದಕ್ಕೆ ಎಲ್ಲೆಡೆ ಬಹಳ ವಿರೋಧ ವ್ಯಕ್ತವಾಯಿತು. ಕಿರಣ್ ರಿಜಿಜುರ ಮಾತು ಅಸಾಂವಿಧಾನಿಕ, ಅಪ್ರಬುದ್ಧ ಹೇಳಿಕೆ ಎಂದು ಮಾಧ್ಯಮಗಳು ಹೇಳುತ್ತಿದ್ದರೆ, ಎಡಬಿಡಂಗಿಗಳು, ಬುದ್ಧಿಜೀವಿಗಳು, ವಿಚಾರವಾದಿಗಳು, ಚಿಂತಕರು ಅವರನ್ನು ಕೋಮುವಾದಿ ಎಂದು ಕರೆದರು. ಆದರೆ ಇದರಲ್ಲಿ ಯಾವೊಬ್ಬನೂ ಕಿರಣ್ ಹೇಳಿದ್ದು ಎಷ್ಟು ಸರಿ ಎಷ್ಟು ತಪ್ಪು ಎಂಬುದನ್ನು ಆಲೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಅಸಲಿಗೆ ಈ ಮತಾಂತರದ ವಿಚಾರ ಎತ್ತಿದ್ದು ಕಾಂಗ್ರೆಸ್. ಅವರನ್ನು ಎಲ್ಲರೂ ಆಗಲೇ ಪ್ರಶ್ನಿಸಬೇಕಿತ್ತು. ಅದನ್ನು ಬಿಟ್ಟು ಮೂರು ದಿನಗಳ ನಂತರ ಪ್ರತಿಕ್ರಿಯೆ ನೀಡಿದ ಕಿರಣ್ ರಿಜಿಜು ಮೇಲೆ ಹರಿಹಾಯ್ದರೆ ಏನು ಪ್ರಯೋಜನ? ಅದೂ ಅವರು ಇದ್ದಿದ್ದನ್ನೇ ಹೇಳಿರುವಾಗ? ಅವರ ಹೇಳಿಕೆಯ ಮೊದಲ ಸಾಲು ಅವಲಂಬಿತವಾಗಿರುವುದೇ ಎರಡನೇ ಸಾಲಿನಿಂದ. ಭಾರತದಲ್ಲಿ ಮತಾಂತರವಾಗುತ್ತಿರುವ ಸಂಖ್ಯೆಯೇನು ಕಡಿಮೆಯಿದೆಯಾ? ಕಿರಣ್ ಹೇಳಿದ್ದ ಮಾತು ಎಷ್ಟು ಸತ್ಯ ಎಂದು ಒಮ್ಮೆ ನೀವು ಸೆನ್ಸಸ್ ರಿಪೋರ್ಟ್ ನೋಡಿದರೆ ಎಲ್ಲವೂ ತಿಳಿಯುತ್ತದೆ. ಅರುಣಾಚಲ ಪ್ರದೇಶದಲ್ಲಿ ಮತಾಂತರದ ವಿರುದ್ಧ ಕಾನೂನು ತಂದರೂ ಅದು ಬೇರೆ ರಾಜ್ಯಗಳಲ್ಲಿ ಆದಂತೆ ಪರಿಣಾಮಕಾರಿಯಾಗಿ ಆಗಲೇ ಇಲ್ಲ.
2001ರ ಸೆನ್ಸಸ್ನ ಪ್ರಕಾರ ಅರುಣಾಚಲ ಪ್ರದೇಶದ ಜನಸಂಖ್ಯೆ 10.98 ಲಕ್ಷ. 2011 ಜನಸಂಖ್ಯೆ 13.82ಲಕ್ಷ. 2001ರ ಪ್ರಕಾರ ಹಿಂದೂಗಳು ಶೇ. 34.06ರಷ್ಟು ಇದ್ದರು. ಆದೇ 2011ರಲ್ಲಿ ಶೇ.29.04ಕ್ಕೆ ಇಳಿದಿದೆ. ಅಲ್ಲಿಗೆ ಹಿಂದೂಗಳ ಜನಸಂಖ್ಯೆಯಲ್ಲಿ ಕುಸಿತ ಎಂದಾಯಿತು. 2001ರ ಪ್ರಕಾರ ಕ್ರಿಶ್ಚಿಯನ್ನರು ಶೇ. 18.7ರಷ್ಟು ಇದ್ದರು. 2011ರ ಪ್ರಕಾರ ಶೇ. 30.26ರಷ್ಟು ಆಗಿದೆ. ಅಂದರೆ ಕ್ರಿಶ್ಚಿಯನ್ನರ ಸಂಖ್ಯೆ 2001ಕ್ಕೆ ಹೋಲಿಸಿದರೆ 2011ರಲ್ಲಿ ಶೇ.67ರಷ್ಟು ಹೆಚ್ಚಾಗಿದೆ. ಇನ್ನೂ ಬೇರೆ ಬೇರೆ ಧರ್ಮಗಳನ್ನು ಪಾಲಿಸುವವರ ಸಂಖ್ಯೆಯೂ ಶೇ. 30.7ರಿಂದ 26.2ಕ್ಕೆ ಇಳಿದಿದೆ. ನೀವು ಈ ಸೆನ್ಸಸ್ ವರದಿಯನ್ನು ಸರಿಯಾಗಿ ಗಮನಿಸಿದರೆ ಮತಾಂತರದ ಛಾಯೆ ಕಾಣಿಸದೇ ಇರುವುದಿಲ್ಲ. ಮತಾಂತರ ಕೇವಲ ಇಂದು ನಿನ್ನೆಯಿಂದ ನಡೆಯುತ್ತಿಲ್ಲ. ಬದಲಿಗೆ ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಎಷ್ಟು ಹಿಂದಿನಿಂದ ಇದರ ಪಿಡುಗು ನಮ್ಮನ್ನು ಕಾಡಿತ್ತು ಎಂಬುದಕ್ಕೆ ಗೋವಾದ ಒಂದು ಉದಾಹರಣೆ ಕೊಡುತ್ತೇನೆ ಕೇಳಿ. ಆಗಿನ ಕಾಲದಲ್ಲಿ ಗೋವಾದಲ್ಲಿ ಪೋರ್ಚುಗೀಸರ ಹಾವಳಿ ಬಹಳ ಇತ್ತು.
ಅದು ಇತಿಹಾಸ ಪುಸ್ತಕದಲ್ಲಿ ವಿಸ್ತೃತವಾಗಲ್ಲದಿದ್ದರೂ ಸಂಕ್ಷಿಪ್ತವಾಗಿ ದಾಖಲಾಗಿದೆ. ಪೋರ್ಚುಗೀಸರು ನಮ್ಮ ದೇವಸ್ಥಾನಗಳ ಮೇಲೆ ದಾಳಿ ಮಾಡುತ್ತಿರುವುದು ಒಂದೆಡೆಯಾದರೆ, ಮತಾಂತರ ಇನ್ನೊಂದು ಕಡೆ. ಗೋವಾದಲ್ಲಿ ಕೆಡವಿದ್ದ ದೇವಸ್ಥಾನಗಳೆಲ್ಲವೂ ಈಗ ಚರ್ಚ್ಗಳಾಗಿದೆ. 1541ರ ನವೆಂಬರ್ 6ರಂದು ರಾಜ ಕುಟುಂಬದ ಮಾರ್ಟಿನ್ ಅಫೋನ್ಸೋ ಡಿ ಮೆಲೊ ಪೋರ್ಚುಗಲ್ ರಾಜನಿಗೆ ಒಂದು ಪತ್ರ ಬರೆಯುತ್ತಾನೆ – ‘ಇಲ್ಲಿ ಗೋವಾದ ದ್ವೀಪಗಳಲ್ಲಿರುವ ಬಹುತೇಕ ಹಿಂದೂ ಮತ್ತು ಮುಸ್ಲಿಮರನ್ನು ಈಗಾಗಲೇ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಯಾಗಿದೆ. ಇನ್ನೂ ಸಾವಿರ ಸಾವಿರ ಜನರನ್ನು ಮತಾಂತರ ಮಾಡಬಹುದಿತ್ತು. ಆದರೆ ಇಲ್ಲಿನ ಕೆಲ ಹಿಂದೂಗಳೂ ಬಹಳ ಅಧ್ಯಾತ್ಮಿಕವಾಗಿ ಬಲಶಾಲಿಗಳಾಗಿದ್ದು ಕೃಷ್ಣ ಜಪ ಮಾಡುತ್ತಲೇ ಇರುತ್ತಾರೆ. ಮುಸ್ಲಿಮರೂ ಅಷ್ಟೇ ಅಲ್ಲಾಹ್ನನ್ನು ಬಿಟ್ಟುಕೊಡುತ್ತಿಲ್ಲ. ಪ್ರಭುಗಳೇ, ಇದಕ್ಕೆ ಪರಿಹಾರವಿದೆ. ಇಲ್ಲಿನ ಸ್ಥಳೀಯ ನಾಯಕರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದರೆ ಅವರ ಅನುಯಾಯಿಗಳೂ ಮತಾಂತರಗೊಳ್ಳುತ್ತಾರೆ.
ಒಮ್ಮೆ ಮತಾಂತರವಾಗಲು ನಿರಾಕರಿಸಿದರೆ, ನಾಯಕರನ್ನು ಪೋರ್ಚುಗಲ್ಗೆ ಎಳೆದೊಯ್ದು ಶಿಕ್ಷಿಸಿರಿ. ಇಲ್ಲಿನ ಜನರು 6 ತಿಂಗಳೊಳಗಾಗಿ ಮತಾಂತರಗೊಳ್ಳಬೇಕು ಇಲ್ಲದಿದ್ದರೆ ಈ ದ್ವೀಪವನ್ನು ತೊರೆಯಬೇಕು ಎಂದು ಆದೇಶಿಸಿ. ಆಗ ಯಾಕೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದಿಲ್ಲ ನಾನೂ ನೋಡುತ್ತೇನೆ’ ಎಂದು ಪತ್ರ ಬರೆದಿದ್ದ. ನೂರಾರು ವರ್ಷಗಳಿಂದಲೂ ಈ ಮತಾಂತರ ಚಾಲ್ತಿಯಲ್ಲಿದೆ. ಕಿರಣ್ ರಿಜಿಜು ಹೇಳಲು ಹೊರಟಿದ್ದೂ ಇದನ್ನೇ. ಸದ್ದಿಲ್ಲದೇ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ. ಹಾಗಾಗಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಹಿಂದೂಗಳು ರಾಜ್ಯ ಬಿಟ್ಟು ಹೋಗಿರಬಹುದು ಅಥವಾ ಲೆಕ್ಕಕ್ಕೇ ಸಿಗದಿರಬಹುದು ಎಂದು ಊಹೆ ಮಾಡಬಹುದು. ಆದರೆ ಅದೂ ಸಾಧ್ಯವಿಲ್ಲ. ಕ್ರಿಶ್ಚಿಯನ್ನರೇಕೆ ರಾಜ್ಯ ಬಿಟ್ಟು ಹೋಗುತ್ತಿಲ್ಲ ಎಂಬ ಪ್ರಶ್ನೆ ಬರುತ್ತದೆ. ಕೇವಲ ಹಿಂದೂಗಳೇ ರಾಜ್ಯ ಬಿಟ್ಟು ಹೋಗುತ್ತಿದ್ದಾರೆಂದರೆ, ಯಾಕಾಗಿ ಬಿಟ್ಟು ಹೋಗುತ್ತಾರೆ?
ಅಷ್ಟು ದೊಡ್ಡ ಸಂಖ್ಯೆಯಲ್ಲಿ? ಕ್ರಿಶ್ಚಿಯನ್ನರು ಹೇಗೆ 67% ಹೆಚ್ಚಳವಾದರು? ಇದಕ್ಕೆಲ್ಲ ನಮ್ಮ ಬುದ್ಧಿಜೀವಿ ವರ್ಗ ತಲೆ ಕೆಡಿಸಿಕೊಳ್ಳುವುದಕ್ಕೇ ಹೋಗುವುದಿಲ್ಲ. ಏಕೆಂದರೆ ಈ ಲೆಕ್ಕಾಚಾರಗಳೆಲ್ಲವೂ ಮತಾಂತರದ ಕರಾಳ ಮುಖವನ್ನು ಬಿಚ್ಚಿಡುತ್ತಾ ಹೋಗುತ್ತದೆ. ಹಾಗಾಗಿ ಯಾರಿಗೂ ಅರುಣಾಚಲ ಪ್ರದೇಶ ಕಾಂಗ್ರೆಸ್ ನೀಡಿದ ಹೇಳಿಕೆ ದೊಡ್ಡದು ಎಂದು ಅನಿಸುವುದೇ ಇಲ್ಲ. ಅರುಣಾಚಲ ಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಮತಾಂತರ ನಿತ್ಯವೂ ಹೊಸ ಹೊಸ ರೀತಿಯಲ್ಲಿ ನಡೆಯುತ್ತಿದೆ ಅದು ವೈರಸ್ ಹಾಗೆ ಹಬ್ಬುತ್ತಿದೆ. ಮತಾಂತರ ವಾದ ಹಿಂದೂಗಳು ಯಾರಿಗೂ ತಾವು ಮತಾಂತರ ವಾಗಿದ್ದೇವೆಂದು ಹೇಳುವುದೇ ಇಲ್ಲ. ಇವರು ಕೇವಲ ಮತಾಂತರದಿಂದ ಸಿಕ್ಕ ಬೈಕ್ ಓಡಿಸಿಕೊಂಡು, ಕೊಟ್ಟಷ್ಟು ಹಣ ತೆಗೆದುಕೊಂಡು ಸುಮ್ಮನಿದ್ದರು ಬಿಡುತ್ತಾರೆ.
ಅಲ್ಲಿಗೆ ಮತಾಂತರಿಗಳಿಗೆ ಕೆಲಸ ಮಾಡಿದ ಸಾರ್ಥಕ್ಯವೂ ಸಿಗುತ್ತದೆ. ಮತಾಂತರಗೊಂಡಿರುವವರಿಗೂ ಹಣ ಸಿಗುತ್ತದೆ. ಇಂಥವರಿಗೆ ಕ್ರಿಪ್ಟೋ ಕ್ರಿಶ್ಚಿಯನ್ಸ್ ಎನ್ನುತ್ತಾರೆ. ಈ ಜನಾಂಗ ಇದೆ ಅಂತಲೂ ಗೊತ್ತಾಗುವುದಿಲ್ಲ. ಕಾರಣ ಪಾರ್ವತಿ, ಶಂಕರ ಎಂದು ಇವರ ಹೆಸರಿದ್ದಿದ್ದರೆ, ಹೆಸರು ಹಾಗೇ ಇರುತ್ತದೆ. ಹೆಸರನ್ನೂ ಬದಲು ಮಾಡಿಕೊಳ್ಳುವುದಿಲ್ಲ. ಆದರೆ ಮನೆಯಲ್ಲಿ ಮಾತ್ರ ಜೀಸಸ್ ಫೋಟೊ ಇಟ್ಟು ಪೂಜೆ ಮಾಡುತ್ತಾರೆ. ಹೀಗೆ ನಮ್ಮೊಂದಿಗೇ ಇದ್ದು ತಮ್ಮ ಕಷ್ಟಗಳು ನಿವಾರಣೆಯಾದ ಬಗೆಯನ್ನು ಲೋಕಾಭಿರಾಮವಾಗಿ ನಮ್ಮ ಜತೆ ಹರಟುತ್ತಾ ನಮಗರಿವಿಲ್ಲದಂತೆ ನಮ್ಮನ್ನು ಮತಾಂತರಕ್ಕೆ ಎಳೆಯುತ್ತಾರೆ. ಅಥವಾ ನಾವು ತುಂಬ ದುಃ ಖದಲ್ಲಿದ್ದಾಗ ಚರ್ಚ್ಗೆ ಕರೆದುಕೊಂಡು ಹೋಗುವುದು ಇತ್ಯಾದಿಗಳನ್ನು ಮಾಡುತ್ತಾರೆ. ಇದು ಅವರಿಗೆ ನೀಡುವ ಸೀಕ್ರೆಟ್ ಟಾಸ್ಕ್ ಎಂದರೂ ತಪ್ಪಲ್ಲ.
ಶತಮಾನಗಳಿಂದ ನಮ್ಮ ದೇಶ ಅದೆಷ್ಟು ಅಭಿವೃದ್ಧಿ ಆಗಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ ಆದರೆ ಮತಾಂತರ ಮಾಡುವ ವಿಧಾನವಂತೂ ದಿನೇ ದಿನೆ ಹೊಸ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ವಿದೇಶದಿಂದ ಹಣ ಬರುವುದು ಗೊತ್ತೇ ಇದೆ. ಇಲ್ಲಿ ಮತಾಂತರ ಮಾಡುವುದಕ್ಕೆ ಟ್ರೈನಿಂಗ್ ಕೂಡ ನಡೆಯುತ್ತದೆ. ಹಾಗೆ ಟ್ರೈನಿಂಗ್ ಕೊಡುವುದಕ್ಕೆ ಬರುವವರು ವಿದೇಶದ ಎನ್ ಜಿಓದಿಂದ ನೇಮಕಗೊಂಡಿರುವವರು. ನಾವು ಬೇರೆ ದೇಶಕ್ಕೆಲ್ಲ ಟೂರಿಸ್ಟ್ ವೀಸಾದ ಮೇಲೆ ಹೋದಾಗ ಅಲ್ಲಿ ಪ್ರವಾಸಿಯಾಗಿಯಲ್ಲದೇ ಪಾರ್ಟಿ ಆಯೋಜಿಸಿದರೂ ನೂರೈವತ್ತು ಪ್ರಶ್ನೆ ಕೇಳುತ್ತಾರೆ, ಪೆಬ್ಬೆಬ್ಬೆ ಮೆಮ್ಮೆಮ್ಮೆ ಎಂದರೆ ನೇರವಾಗಿ ಜೈಲಿನೊಳಗೇ! ಆದರೆ ಭಾರತಕ್ಕೆ ಪ್ರವಾಸಿ ವೀಸಾ ತೆಗೆದುಕೊಂಡು ಬರುವ ಕ್ರಿಶ್ಚಿಯನ್ ಮಿಷನರಿಗಳು ದೊಡ್ಡ ದೊಡ್ಡ ಹೀಲಿಂಗ್ ಕಾರ್ಯಕ್ರಮದ ಹೆಸರಲ್ಲಿ, ಸಣ್ಣ ಪುಟ್ಟ ಮೀಟಿಂಗ್ ನೆಪದಲ್ಲಿ ಮತಾಂತರ ಮಾಡುತ್ತಾ ಇರುತ್ತಾರೆ.
ಇದರ ವ್ಯವಸ್ಥೆ ಹೇಗಿದೆ ನೋಡಿ, ನಮ್ಮ ದೇಶದಲ್ಲಿರುವ ಬಹುರಾಷ್ಟ್ರೀಯ ಕಂಪನಿಗೆ ಆಯಾ ದೇಶದಿಂದ ತರಬೇತಿ ಕೊಡಲು ಭಾರತಕ್ಕೆ ಬರುವವರನ್ನು ನೋಡಿದ್ದೇವೆ, ಆದರೆ ಮತಾಂತರದ ತರಬೇತಿ ಕೊಡುವುದಕ್ಕೂ ಬಂದಿರುವುದಕ್ಕೇ ಕೇವಲ 10 ವರ್ಷಗಳಲ್ಲಿ ಕ್ರಿಶ್ಚಿಯನ್ನರು ದ್ವಿಗುಣವಾಗಿರುವುದು. ಸೆನ್ಸಸ್ ವರದಿಯೇ ಇಷ್ಟು ಆಘಾತಕಾರಿಯಾಗಿರಬೇಕಾದರೆ, ಸೆನ್ಸಸ್ಗೆ ಸಿಗದ ಕ್ರಿಶ್ಚಿಯನ್ನರು ಎಷ್ಟಿರಬಹುದು? ನಾವಿನ್ನೂ 2011ರ ಸೆನ್ಸಸ್ ಬಗ್ಗೆಯೇ ಮಾತನಾಡುತ್ತಿದ್ದೇವೆ, 2017ರಲ್ಲಿ ಕಥೆ ಹೇಗಿದ್ದಿರಬಹುದು? ಇವೆಲ್ಲ ಬೇರೆ ರಾಜ್ಯದ ಕಥೆಗಳಾಯಿತು. ನಮ್ಮ ರಾಜ್ಯದ, ಅದೂ ಬೆಂಗಳೂರಿನಲ್ಲಿ ಯಾವ ಮಟ್ಟಿಗೆ ಮಿಷನರಿ ಕೆಲಸಗಳು ಹೇಗೆ ಆಗುತ್ತಿವೆ ಎಂದು ಕಂಡಿದ್ದೀರಾ? Indian Baptist Society ಎಂಬ ಸಂಘಟನೆಯಿದೆ. ಅದು ಕರ್ನಾಟಕದಾದ್ಯಂತ ‘ಸಮಾಜಸೇವೆ’ಯಲ್ಲಿ ನಿರತವಾಗಿದೆ. ಕ್ರಿಸ್ತ ಅನುಯಾಯಿ ಗಳನ್ನು ಹೆಚ್ಚು ಮಾಡಲು ಕೇವಲ 2016ರಲ್ಲೇ 1373 ಹೊಸ ತರಬೇತುದಾರರನ್ನೇ ಸೃಷ್ಟಿ ಮಾಡಿತ್ತು.
ಇವರು 679 ಮನೆಗಳನ್ನು ಚರ್ಚ್ಗಳನ್ನಾಗಿ ಮಾಡಿದ್ದವು. ಆ 1373 ಜನರಿಗೆ ತರಬೇತಿ ನೀಡುವುದಕ್ಕಾಗಿ ಮತ್ತು ಧರ್ಮ ಪ್ರಚಾರಕ್ಕಾಗಿ Indian Baptist Societyಯು Tree of Life, Training for Trainers (T4T), and Shepherding Conferences ಎಂಬ ಕಾರ್ಯಕ್ರಮ ಮಾಡಿತ್ತು. ಇವರಿಗೆ ಈಗ ಒಂದು ದೊಡ್ಡ ಪ್ರಾಜೆಕ್ಟ್ ಕೊಟ್ಟಿದೆ ಅದೇನೆಂದರೆ, ಸ್ಪಿರಿಚುವಲ್ ಮೀಟಿಂಗ್, ಹೀಲಿಂಗ್ ಇತ್ಯಾದಿಗಳನ್ನು ಮಾಡಿ, ಕಾರ್ಯಕ್ರಮಗಳನ್ನು ಮಾಡಿ ಕರ್ನಾಟಕವೊಂದರಲ್ಲೇ 50,000 ಮನೆಗಳನ್ನು ಕ್ರಿಶ್ಚಿಯನ್ ಮನೆಗಳನ್ನಾಗಿ ಮಾಡಬೇಕೆಂದು ಗುರಿಯನ್ನಿಟ್ಟುಕೊಂಡಿದ್ದಾರೆ. ತರಬೇತು ದಾರರನ್ನು ತಯಾರು ಮಾಡಿದರೆ ಸಾಕು ಅವರೇ ಎಲ್ಲ ಕೆಲಸ ಮಾಡಿ ಮುಗಿಸುತ್ತಾರೆ. ಫೆ.17 ಉತ್ತರ ಬೆಂಗಳೂರಿನಲ್ಲಿರುವ ಮೆಝ್ಪಾ ತೆಲುಗು ಚರ್ಚ್ನಲ್ಲಿ ಕ್ರಿಶ್ಚಿಯನ್ ಪುಸ್ತಕ ಮೇಳವಿತ್ತು, ಫೆ.18ಕ್ಕೆ ಲಿಂಗರಾಜಪುರಂನಲ್ಲಿ India Campus Crusade For Christ ನಲ್ಲಿ ವಾರ್ಷಿಕ ಮೀಟಿಂಗ್ ಇತ್ತು, ಫೆ. 19ಕ್ಕೆ St. Mark’s Cathedral Auditoriumನಲ್ಲಿ ಗಾಸ್ಪೆಲ್ ಎಲ್ಲಕ್ಕಿಂತಲೂ ಶ್ರೇಷ್ಠ ಎಂಬುದರ ಬಗ್ಗೆ ಪರದೇಶಿ ಡಾ. ಕ್ರಿಶ್ಚಿಯನ್ ಹೋಫ್ರೈಟರ್ ಸೆಮಿನಾರ್ ಮಾಡಿದ್ದಾನೆ.
ಅಷ್ಟಕ್ಕೂ ಇವರು ತಮ್ಮ ಧರ್ಮ ಶ್ರೇಷ್ಠ ಎಂದು ಹೇಳಿಕೊಳ್ಳಲಿ ಅದನ್ನು ಬಿಟ್ಟು ‘ಎಲ್ಲ ಧರ್ಮಗಳಿಗಿಂತ’ ಎಂದು ಹೇಳುವ ಅಗತ್ಯವೇನು? ಇಂಥ ಸಮಾಜಸೇವಾ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ಸಾಕಷ್ಟಿವೆ. ನೀವು http://www.christianmetro.com/ events ಗೆ ಹೋಗಿ ಬೆಂಗಳೂರಿನಲ್ಲಿ ಕ್ರಿಶ್ಚಿಯನ್ನರ ಮುಂದಿನ ಮೀಟಿಂಗ್ ಎಲ್ಲಿ ಯಾವಾಗ ಎಂಬ ಎಲ್ಲ ಮಾಹಿತಿಗಳಿವೆ. ಕನ್ನಡಿಗರಿಗೆ ಮತ್ತು ದಕ್ಷಿಣ ಭಾರತೀಯರಿಗೆ ಸಂಗೀತ ನಿರ್ದೇಶಕ ಕುಲ್ದೀಪ್ ಎಂ ಪೈ ಎಂಬುವವರು ಗೊತ್ತಿರಬಹುದು. ಭಕ್ತಿ ಹಾಡುಗಳ ಮೂಲಕ ಪುಟ್ಟ ಹುಡುಗಿ ಸೂರ್ಯ ಗಾಯತ್ರಿಯನ್ನು ಪರಿಚಯಿಸಿದವರು. ಇಂಥವರು ಯೂಟ್ಯೂಬ್ನಲ್ಲಿ ಹನುಮಾನ ಚಾಲೀಸಾ, ಭಾಗ್ಯದ ಲಕ್ಷ್ಮೀ ಬಾರಮ್ಮಾ ಎಂಬ ಹಾಡುಗಳನ್ನು ಹಾಕಿಕೊಂಡರೆ, ಮತಾಂತರಿಗಳು ಆ ವಿಡಿಯೊಗೆ ಕಮೆಂಟ್ ಮಾಡುತ್ತಾರೆ. ಕ್ರೈಸ್ತ ಧರ್ಮಕ್ಕೆ ಬನ್ನಿ ಎನ್ನುತ್ತಾರೆ. ಸ್ವತಃ ಕುಲ್ದೀಪ್ ಪೈಗೂ ಕ್ರಿಶ್ಚಿಯನ್ ಧರ್ಮಕ್ಕೆ ಬರಲು ಆಹ್ವಾನ ನೀಡಿದ್ದಾರೆ. ಆದರೆ ಸಿಟ್ಟಿಗೆದ್ದ ಕುಲ್ದೀಪ್ ‘ನನ್ನ ಸನಾತನ ಧರ್ಮದ ಹತ್ತಿರ ಬರುವುದ್ಕೂ ಲಾಯಕ್ಕಿಲ್ಲ. ನಾನು ಮತಾಂತರವಾಗುವುದಿಲ್ಲ. ಹತ್ತಿರ ಬಂದರೆ ನಿಮ್ಮನ್ನು ಓಡಿಸುತ್ತೇನೆ…’ ಎಂದು ಉತ್ತರಿಸಿದ್ದಾರೆ.
ಕರ್ನಾಟಕದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ದೊಡ್ಡ ಜಾಲವೇ ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಆದರೆ ನಾವು ಇಲ್ಲಿ ಯೋಚಿಸಬೇಕಾಗಿರುವುದೇನೆಂದರೆ, ಮತಾಂತರ ಇಂಥ ಸ್ಥಿತಿಯನ್ನು ತಲುಪಿರುವಾಗ, ಕ್ರಿಶ್ಚಿಯನ್ನರ ಸಂಖ್ಯೆ ದ್ವಿಗುಣಗೊಳ್ಳುತ್ತಾ, ಹಿಂದೂಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರ ಬಗ್ಗೆ ಸಚಿವನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದರೆ ತಪ್ಪೇನು? ಅದರ ಬಗ್ಗೆ ಮಾಧ್ಯಮಗಳು ಏಕೆ ಎದೆ ಬಡಿದುಕೊಂಡು ಅಳುತ್ತಿವೆ? ಪ್ರಗತಿಪರರು, ಬುದ್ಧಿಜೀವಿಗಳೇಕೆ ಬಾಲಕ್ಕೆ ಬೆಂಕಿ ಬಿದ್ದಂತೆ ಆಡುತ್ತಿದ್ದಾರೆ? ಅಲ್ಲಿಗೆ ಮಿಷ‘ನರಿ’ಗಳ ಜಾಲ ಎಷ್ಟಿದೆ ಎಂಬುದನ್ನು ಊಹೆ ಮಾಡಿಕೊಳ್ಳಿ. Just Think!
Chiranjeevi Bhat is a journalist at Hosa-Diganta. Previously he has worked in Vishwavaani, Kannada Prabha, Suvarna News 24/7 and Samaya News. His writings will be mainly on security related issues, politics, distortion and appropriation. You can follow him on Twitter @mechirubhat or can read his Kannada Articles in www.chirubhat.com