Dharmic Illiteracy
 
ನಗರದ ಧಾರ್ಮಿಕ ಅನಕ್ಷರತೆ ಹಾಗೂ ವೈದಿಕ ಉದ್ಯಮ

“ನಮ್ಮದು ಯಾವ ಶಾಖಾ ಸೂತ್ರ, ಅದರ ತಿಳುವಳಿಕೆ ಇದ್ದವರನ್ನೇ ಅಚಾರ್ಯರಾಗಿ ಆಯ್ದುಕೊಳ್ಳಬೇಕು” ಅನ್ನುವ ಕನಿಷ್ಠ ಎಚ್ಚರಿಕೆಯೂ ಇಲ್ಲದ ಸ್ಥಿತಿ ಇದೆ. ಯಾರು ಸಾಮಾಜಿಕವಾಗಿ ಪ್ರತಿಷ್ಠಿತರೊ, ಅವರ ಸಹವಾಸದಿಂದ ನಮ್ಮ ಪ್ರತಿಷ್ಠೆಯೂ ಏರುತ್ತೆ ಅನ್ನುವ ಲೆಕ್ಕಾಚಾರ.

ಜ್ಯೋತಿಷ್ಯ ಹೇಳುವ ಆಚಾರ್ಯರು ತುಂಬಾ ಗರಂ ಆಗಿದ್ರು.

ಏನಾಯ್ತು ಅಚಾರ್ರೆ ಅಂತ ಕೇಳಿದ್ರೆ, “ಈ ದೇವಸ್ಥಾನ ಅರ್ಚಕರುಗಳದ್ದು ಅಧಿಕ ಪ್ರಸಂಗ ಜಾಸ್ತಿ ಆಗೇದ ನೋಡ್ರಿ. ಬಾಯಿಗೆ ಬಂದದ್ದು ಒದರತಾವ” ಅಂತ ಬಯ್ಯತೊಡಗಿದ್ರು.

ನಡೆದಿದ್ದು ಏನಂದ್ರೆ, ಇವರು ಯಾರದೋ ಮದುವೆಗೆ ಎರಡು ಜಾತಕ ಹೊಂದಾಣಿಕೆ ಮಾಡಿ ಕೊಟ್ಟಿದ್ದಾರೆ.
ಜಾತಕ ಹೊಂದಿಸಿಕೊಂಡು ಹೋದವರು ಸುಮ್ಮನೇ ಇರದೇ, ತಮ್ಮ ಮನೆಯ ಹತ್ತಿರ ದೇವಸ್ಥಾನದ ಅರ್ಚಕರಿಗೆ ಮತ್ತೆ ಅವೇ ಜಾತಕ ತೋರಿಸಿದ್ದಾರೆ.

ಅರ್ಚಕರು, ಈ ಜಾತಕ ಹೊಂದಾಣಿಕೆ ಇಲ್ಲ, ಮದುವೆ ನಡೆದ್ರೆ ಹುಡುಗ ಸಾಯ್ತಾನೆ ಅಂತ ಹೇಳಿದ್ದಾರೆ.
ಅವರು ಈ ಆಚಾರ್ಯರಿಗೆ ಫೋನು ಮಾಡಿ, “ನಿಮಗೆ ಜ್ಯೋತಿಷ್ಯ ಸರಿಯಾಗಿ ಗೊತ್ತಿಲ್ಲ, ನಮ್ಮ ಅರ್ಚಕರು ಹಿಂಗೆ ಹೇಳಿದ್ರು” ಅಂತ ಕ್ಯಾತೆ ತೆಗೆದಿದ್ದಾರೆ.

ಈಗ, ಅವರಿಗೆ ಜ್ಯೋತಿಷ್ಯ ಗ್ರಂಥದ reference ಕೊಟ್ಟು ಇದು ಹೀಗೆ ಅಂತ ಹೇಳಿದ್ರೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ. ಅರ್ಚಕರು ಯಾವ ಶಾಸ್ತ್ರೀಯ ಅಂಶಗಳ ಆಧಾರದ ಮೇಲೆ ಹೇಳಿದ್ರು ಅಂತ ಕೇಳಿದ್ರೆ, ಉತ್ತರಿಸಲೂ ಗೊತ್ತಿಲ್ಲ.
ಎಲ್ಲಾ ಅಯೋಮಯ.

ಒಟ್ಟಿನಲ್ಲಿ ಆರು ವರ್ಷ ಪಟ್ಟು ಮುಂಬೈ ವಿದ್ಯಾಪೀಠದಲ್ಲಿ ಜ್ಯೋತಿಷ್ಯ ಕಲಿತ ಆಚಾರ್ಯರಿಗೆ “ಜ್ಯೋತಿಷ್ಯ ಗೊತ್ತಿಲ್ಲ” ಅನ್ನೋ ಸರ್ಟಿಫಿಕೇಟ್ ಭಾಗ್ಯ.

ನನ್ನದೂ ಒಂದು ಇಂಥದ್ದೇ ಅನುಭವ ಹೇಳ್ತೇನೆ. “ನಮ್ಮ ಮಗನ ಉಪನಯನ, ನೀನು ಬರಬೇಕು” ಅಂತ ಜಯನಗರದ ಶ್ರೀಮಂತ ಬಡಾವಣೆಯ ನಿವಾಸಿಯೊಬ್ಬರು ಕರೆದ್ರು. ಪತ್ರಿಕೆ ನೋಡಿದ್ರೆ ಲಲಿತಾ ಪಂಚಮಿ.
ಶರದ್ ಋತುವಿನಲ್ಲಿ ಬರುವ ನವರಾತ್ರಿಯ ಮಧ್ಯದಲ್ಲಿ ಉಪನಯನ.

“ಮುಹೂರ್ತ ಇಟ್ಟುಕೊಟ್ಟಿದ್ದು ಯಾರು ನಿಮಗೆ” ಅಂತ ಹಿಂಜರಿಕೆಯಿಂದಲೇ ಕೇಳಿದೆ.

ನನಗೆ ಜ್ಯೋತಿಷ್ಯ ಗೊತ್ತಿಲ್ಲ, ಆದ್ರೆ ಉಪನಯನ ಮಾಘಾದಿ ಪಂಚಕದಲ್ಲಿ ನಡೆಯಬೇಕು ಅನ್ನೋದು ಗೊತ್ತು. “ಪಂಚಕ” ಅಂದ್ರೆ, ಉತ್ತರಾಯಣದಲ್ಲಿ ಬರುವ ಮಾಘ, ಫಾಲ್ಗುಣ, ಚೈತ್ರ, ವೈಶಾಖ, ಜ್ಯೇಷ್ಠ ಈ ಐದು ಮಾಸಗಳು. ಆ ಐದು ಮಾಸಗಳಲ್ಲಿಯೂ ಶುಕ್ಲ ಪಂಚಮಿಯಿಂದ ಕೃಷ್ಣ ತೃತೀಯಾ ನಡುವೆಯೇ ಉಪನಯನ ಮಾಡಬೇಕು ಅನ್ನುವುದು ಬೇಸಿಕ್ ಮಾಹಿತಿ. ಆ ಬೇಸಿಕ್ ಮಾಹಿತಿ ನನಗೆ ಇರುವುದರಿಂದ ಮುಹೂರ್ತ ಇಟ್ಟವರು ಯಾರು ಅಂತ ಕೇಳಬೇಕಾಯ್ತು.

ಸ್ನೇಹಿತರು “ಯಾಕೆ? ಮುಹೂರ್ತ ಸರಿ ಇಲ್ಲವಾ?” ಅಂತ ಕೇಳಿದ್ರು.

“ಸರಿ-ತಪ್ಪು ಪ್ರಶ್ನೆ ಅಲ್ಲ, ಶರತ್ ಋತು ದಕ್ಷಿಣಾಯನ, ಉಪನಯನಕ್ಕೆ ಉತ್ತರಾಯಣ ಯೋಗ್ಯ” ಅಂತಷ್ಟೇ ಹೇಳುವುದು ನನ್ನಿಂದ ಸಾಧ್ಯವಾಯ್ತು.

“ಅಯ್ಯೋ, ಅದೆಲ್ಲಾ ನಮಗ್ ಗೊತ್ತಿಲ್ಲ. (ಜಯನಗರದಲ್ಲಿ ಗುಡ್ಡದ ಮೇಲೆ ಇರೋ ಪ್ರಸಿದ್ಧ ಆಂಜನೇಯ ದೇವಸ್ಥಾನದ ಹೆಸರು ಹೇಳಿ) ಆ ದೇವಸ್ಥಾನದ ಅರ್ಚಕರೇ ನಮಗೆ ಪುರೋಹಿತರು, ಜ್ಯೋತಿಷಿ ಎಲ್ಲಾ. ಅವರು ಹೇಳಿದಮೇಲೆ ಮುಗೀತು.” ಅಂತ ಹೇಳಿ, ಅವರು ಸಾಮಾಜಿಕವಾಗಿ ಎಷ್ಟು “ಫೇಮಸ್ ಮತ್ತು ಪವರ್ ಫುಲ್” ಅನ್ನುವುದನ್ನು ವರ್ಣಿಸತೊಡಗಿದ್ರು.

ಒಟ್ಟಿನಲ್ಲಿ “ಅಷ್ಟು ಪ್ರಭಾವೀ ವ್ಯಕ್ತಿ ತಪ್ಪಾಗಿರಲು ಸಾಧ್ಯವೇ ಇಲ್ಲ. ನಿನಗೇ ಏನೂ ಗೊತ್ತಿಲ್ಲ” ಅನ್ನುವ ಧ್ವನಿ ಅವರ ಸ್ಪಷ್ಟೀಕರಣದಲ್ಲಿ ಇತ್ತೇ ಹೊರತು, ಸತ್ಯಶೋಧನೆ ಮಾಡುವ ಆಸಕ್ತಿ ಕಾಣಲಿಲ್ಲ.

ಮುಜುಗರದ ವಿಷಯದಿಂದ ವಿಷಯಾಂತರ ಮಾಡಲಿಕ್ಕೆ ”ಉಪನಯನ ಮುಗಿದ ಮೇಲೆ ನಮ್ ಹುಡುಗನಿಗೆ ನೀವೇ ಸಂಧ್ಯಾವಂದನೆ ಹೇಳಿಕೊಡಬೇಕು” ಅಂತ ಸಲುಗೆಯಿಂದ ಹೇಳಿದ್ರು.

“ಅದ್ಹೇಗೆ ಆಗುತ್ತೆ? ನಾನು ಋಗ್ವೇದಿ. ನಿಮ್ಮ ಶಾಖೆ ತೈತ್ತೀರಿಯ ಅಲ್ವಾ ?” ಅಂದೆ.

ಏಕೆಂದರೆ ಅವರು ಹೆಸರಿಸಿದ ಅರ್ಚಕರು ಯಜುರ್ವೇದಿ ಅನ್ನುವ ಮಾಹಿತಿ ನನಗೆ ಇತ್ತು. ಯಜುರ್ವೇದಿಯನ್ನು ಕುಲಪುರೋಹಿತರಾಗಿ ಇಟ್ಟುಕೊಂಡಿದ್ದಾರೆ ಅಂದ ಮೇಲೆ ಇವರೂ ಕೂಡ ಅದೇ ಶಾಖೆಯವರು ಅನ್ನುವುದು ಸರಳವಾಗಿ ಊಹಿಸಬಹುದಾದ ಮಾಹಿತಿ.

“ಇಲ್ಲ, ನಾವೂ ಋಗ್ವೇದಿಗಳೇ” ಅಂತ ಹೆಮ್ಮೆಯಿಂದ ಹೇಳಿಕೊಂಡ್ರು.

“ಹಾಗಾದ್ರೆ ಯಜುರ್ವೇದದ ಪುರೋಹಿತರಿಂದ ಉಪನಯನ ಯಾಕೆ ಮಾಡಿಸಿಕೊಳ್ತಾ ಇದ್ದೀರಿ?” ಅನ್ನುವ ಪ್ರಶ್ನೆ ನನ್ನ ಬಾಯಿಂದ ಬಂದೇ ಬಿಟ್ಟಿತು.

ಅವರಿಗೆ ನನ್ನ ಜೊತೆ ಸಲುಗೆ ಇರುವುದರಿಂದ ಈ ಶಾಕ್ ಕೊಡುವುದರ ಅಗತ್ಯವೂ ಇತ್ತು.

ಆ ಶಾಕ್ ನಲ್ಲಿ ಗಂಡ ಹೆಂಡತಿ ಇಬ್ಬರೂ ಮುಖ ಮುಖ ನೋಡಿಕೊಂಡು ಸುಧಾರಿಸಿಕೊಂಡ ಮೇಲೆ ಹೇಳಿದೆ.

ಶಾಖಾ-ಸೂತ್ರಗಳಲ್ಲಿ ಸಂಕರ ಮಾಡಬಾರದು. ನೀವು ಶಾಕಲ ಶಾಖೆಯವರು. ಆಶ್ವಲಾಯನ ಗೃಹ್ಯಸೂತ್ರದ ಅನುಸಾರ ನಿಮ್ಮ ಗೃಹ್ಯಕರ್ಮ, ಮಕ್ಕಳ ಸಂಸ್ಕಾರ ಕರ್ಮ ಇವೆಲ್ಲ ನಡೀಬೇಕು.

ನಿಮ್ಮ ಪುರೋಹಿತರದ್ದು ತೈತ್ತಿರೀಯ ಶಾಖೆ, ಆಪಸ್ತಮ್ಭ ಅಥವಾ ಬೌಧಾಯನ ಸೂತ್ರದ ಅನುಸಾರ ಉಪನಯನ ಮಾಡಿಸ್ತಾರೆ (ಒಂದು ವೇಳೆ ಗೊತ್ತಿದ್ದರೆ).

ಶಾಖೆ ಮತ್ತು ಸೂತ್ರಗಳ ಪ್ರಕಾರ ನಿಮ್ಮ ವಿಧಿ ಬೇರೆ, ಅವರ ವಿಧಿ ಬೇರೆ. ಅದರಲ್ಲಿ ಸಂಕರ ಆಗಬಾರದು. Continuity ಇದ್ದಾಗ ಮಾತ್ರ ಅವು ಪರಿಣಾಮಕಾರಿ. ಅದರಲ್ಲೂ ಉಪನಯನ ಹದಿನೈದು ಸಂಸ್ಕಾರಗಳ ಪೈಕಿ ಮುಖ್ಯವಾದ ಸಂಸ್ಕಾರ. ಬೀಜಗತ ಮತ್ತು ಗರ್ಭಗತ ಈ ಎರಡೂ ಪ್ರಕಾರದ ದೋಷಗಳನ್ನು, ವಿಕಾರಗಳನ್ನು ತೆಗೆದು ಹಾಕಲಿಕ್ಕಾಗಿ ಸಂಸ್ಕಾರಗಳನ್ನು ಮಾಡೋದು. ಅದು ceremony ಅಲ್ಲ.

ನಾನು ಕೊಟ್ಟ ಶಾಕ್ ನಿಂದ ಮೊದಲೇ ಸಂಕೋಚದ ಮುದ್ದೆಯಾಗಿದ್ದ ದಂಪತಿಗಳು “ಬೀಜ, ಗರ್ಭ” ಇತ್ಯಾದಿ ಶಬ್ದಪ್ರಯೋಗ ಕೇಳಿ ಇನ್ನೂ ಮುಜುಗರಕ್ಕೊಳಗಾಗಿ “ಮತ್ತೊಮ್ಮೆ ಕೂತ್ಕೊಂಡು ಮಾತಾಡೋಣ, ಈಗ ತುಂಬಾ ಜನರನ್ನು ಕರೀಲಿಕ್ಕಿದೆ” ಅಂತ ಹೇಳಿ ಹೊರಟರು.

ನಗರಗಳಲ್ಲಿ ಇರುವ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳಲ್ಲಿ ಕಂಡುಬರುವ ಸಂಗತಿ ಇದು.

“ನಮ್ಮದು ಯಾವ ಶಾಖಾ ಸೂತ್ರ, ಅದರ ತಿಳುವಳಿಕೆ ಇದ್ದವರನ್ನೇ ಅಚಾರ್ಯರಾಗಿ ಆಯ್ದುಕೊಳ್ಳಬೇಕು” ಅನ್ನುವ ಕನಿಷ್ಠ ಎಚ್ಚರಿಕೆಯೂ ಇಲ್ಲದ ಸ್ಥಿತಿ ಇದೆ. ಯಾರು ಸಾಮಾಜಿಕವಾಗಿ ಪ್ರತಿಷ್ಠಿತರೊ, ಅವರ ಸಹವಾಸದಿಂದ ನಮ್ಮ ಪ್ರತಿಷ್ಠೆಯೂ ಏರುತ್ತೆ ಅನ್ನುವ ಲೆಕ್ಕಾಚಾರ.

ಆ ಪ್ರತಿಷ್ಠೆಯ ಮಾನದಂಡ ಯಾವುದು? ದೊಡ್ಡ ದೇವಸ್ಥಾನದಲ್ಲಿ ಇರೋರು, ಟೀವಿಯಲ್ಲಿ ಬರುವವರು, ರಾಜಕಾರಣಿಗಳ ಸಹವಾಸ ಇರುವವರು ಇತ್ಯಾದಿ.

ಚೋರ ಗುರು, ಚಾಂಡಾಲ ಶಿಷ್ಯ ಅನ್ನೋ ಹಾಗೆ, ಅವರಿಗೆ ತಕ್ಕಂತೆಯೇ ಪುರೋಹಿತವರ್ಗವೂ ತಕ್ಕುದಾಗಿದೆ. ಎರಡು ಕೈಗಳಿದ್ದಾಗಲೇ ಚಪ್ಪಾಳೆ ಸಾಧ್ಯ.

ಇನ್ನು ಈ ಪಿ.ಯು.ಸಿ, ಬಿ. ಕಾಮ್ ಇತ್ಯಾದಿ ಫೇಲ್ ಆಗಿ ದೇವಸ್ಥಾನದಲ್ಲಿ ಅರ್ಚಕರಾಗಿ ಬಂದು ಸೇರಿಕೊಂಡವರು, ಯಾರಾದ್ರೂ ತಮ್ಮ ಬಳಿ ಬಂದು ಮುಹೂರ್ತ ಇಟ್ಟುಕೊಡಿ ಅಂತ ಕೇಳಿದಾಗ, “ನಾನು ಅರ್ಚಕ, ಜೋಯ್ಸ ಅಲ್ಲ. ಜೋತಿಷ್ಯಕ್ಕೆ ಜೋಯಿಸರ ಬಳಿ ಹೋಗಿ. ಪೌರೋಹಿತ್ಯಕ್ಕೆ ಪುರೋಹಿತರ ಬಳಿ ಹೋಗಿ” ಅಂತ ಸಲಹೆ ಕೊಡುವುದಿಲ್ಲ.
ನಾನೇ ಆಲ್ ರೌಂಡರ್ ಅಂತ ಪುರೋಹಿತರ ಕೆಲಸವನ್ನೂ ಮಾಡ್ತಾನೆ, ಜೋಯ್ಸರ ಕೆಲಸವನ್ನೂ ಮಾಡ್ತಾನೆ. ಯಾವ ಮಾಹಿತಿಯೂ ಇಲ್ಲದೇ.

ಕೊಟ್ಟರೆ ಅಡುಗೆ ಕಾಂಟ್ರಾಕ್ಟ್ ಕೂಡ ತೆಗೆದುಕೊಳ್ತಾನೆ.

ಆಸ್ಪತ್ರೆಯ ನರ್ಸ್ MRI ಸ್ಕ್ಯಾನ್ ಮಾಡಿ, ರಿಪೋರ್ಟ್ ತಾನೇ ಬರೆದು ಆಪರೇಷನ್ ಥೇಟರ್ ನಲ್ಲಿ ಸರ್ಜರಿಯನ್ನೂ ಮಾಡಿದ ಹಾಗೆ. ಪೆಷಂಟ್ ನ ಸ್ಥಿತಿ ಹರೋ ಹರ.

Featured Image: Wikipedia

Disclaimer: The opinions expressed within this article are the personal opinions of the author. IndiaFacts does not assume any responsibility or liability for the accuracy, completeness, suitability, or validity of any information in this article.