ಪೀಠಿಕೆ
ಭಾರತ ದೇಶವು ಜ್ಞಾನಭೂಮಿ ಎನಿಸಿಕೊಂಡಿದೆ. ಇಲ್ಲಿಯ ಪ್ರಜೆಗಳು ‘ಭಾ-ರತ’ರೆನಿಸಿಕೊಂಡಿದ್ದಾರೆ. ಇವರು ತಮ್ಮ ಅಂತರಂಗದಲ್ಲಿ ಬೆಳಗುವ ‘ಭಾ’ ಎಂದು ಕರೆಸಿಕೊಳ್ಳುವ ಜ್ಞಾನ ಜ್ಯೋತಿಯನ್ನು ಸಾಕ್ಷಾತ್ಕರಿಸಿಕೊಂಡು ಅದರ ಮೂಲಕ ಇಹ-ಪರಗಳಲ್ಲಿ ಸುಖ-ಶಾಂತಿ-ನೆಮ್ಮದಿಗಳನ್ನು ಕಂಡವರು. ನಮ್ಮ ಪ್ರಾಚೀನ ಆರ್ಷಸಾಹಿತ್ಯವನ್ನು ಗಮನಿಸಿದಾಗ ಇದನ್ನೇ ಮೋಕ್ಷ ಸಾಧನವಾದ ಜ್ಞಾನವೆಂಬ ಪದದಿಂದ ವ್ಯವಹರಿಸುತ್ತಿದ್ದರೆಂದು ತಿಳಿದುಬರುತ್ತದೆ. ಜ್ಞಾನವೇ ಮೋಕ್ಷ ಸಾಧನ ಎಂಬ ವಿಷಯದಲ್ಲಿ ಎರಡನೆ ಮಾತಿಲ್ಲ.
“ತಮೇವಂ ವಿದ್ವಾನ್ ಅಮೃತ ಇಹ ಭವತಿ” (ಪುರುಷಸೂಕ್ತ),
“ತಮೇವ ವಿದಿತ್ವಾ ಅತಿಮೃತ್ಯುಮೇತಿ” (ಶ್ವೇತಾಶ್ವತರೋಪನಿಷತ್ತು)
ಮುಂತಾದ ಶ್ರುತಿ-ಇತಿಹಾಸ-ಪುರಾಣಾದಿ ವಚನಗಳು ಈ ವಿಷಯವನ್ನೇ ಸುವ್ಯಕ್ತವಾದ ರೀತಿಯಲ್ಲಿ ಸಾರುತ್ತವೆ.
‘ಜ್ಞಾನ’ ಮತ್ತು ‘ವಿಜ್ಞಾನ’
ಈ ರೀತಿ ಮೋಕ್ಷಕ್ಕೆ ಸಾಕ್ಷಾತ್ಕಾರಣವಾದ ‘ಜ್ಞಾನ’ದ ಜೊತೆಗೆ ನಮ್ಮ ಪ್ರಾಚೀನ ಮಹರ್ಷಿಗಳು ಮತ್ತೊಂದು ಶಬ್ದವನ್ನು ಪ್ರಧಾನವಾಗಿ ಉಪಯೋಗಿಸುತ್ತಿದ್ದರು ಎಂಬ ಅಂಶವು, ನಾವು ನಮ್ಮ ಉಪನಿಷತ್ತು, ಭಗವದ್ಗೀತೆ ಮುಂತಾದ ಗ್ರಂಥಗಳನ್ನು ಅವಲೋಕಿಸಿದಾಗ ಸ್ಪಷ್ಟವಾಗುತ್ತದೆ. ಆ ಶಬ್ದವೇ ‘ವಿಜ್ಞಾನ’ ಎಂಬುದಾಗಿದೆ.
“ವೇದಾಂತ-ವಿಜ್ಞಾನಸುನಿಶ್ಚಿತಾರ್ಥಾಃ”
“ವಿಜ್ಞಾನಂ ಯಜ್ಞಂ ತನುತೇ”
“ವಿಜ್ಞಾನಾತ್ಮಾ ಸಹದೇವೈಶ್ಚ ಸರ್ವೈಃ”
“ಏತಂ ವಿಜ್ಞಾನಮಯಮಾತ್ಮಾನಂ ಉಪಸಂಕ್ರಮ್ಯ” ಎಂಬ ಶ್ರುತಿ ವಾಕ್ಯಗಳಲ್ಲಿ ಹಾಗೂ
“ಜ್ಞಾನಂ ತೇಹಂ ಸವಿಜ್ಞಾನಂ”, “ಜ್ಞಾನಂ ವಿಜ್ಞಾನ ಸಹಿತಂ”, “ಜ್ಞಾನಂ ವಿಜ್ಞಾನಂ ಆಸ್ತಿಕ್ಯಂ”,
ಮುಂತಾದ ಸ್ಮೃತಿವಾಕ್ಯಗಳು ‘ಜ್ಞಾನ’ದ ಜೊತೆಗೆ ‘ವಿಜ್ಞಾನ’ ಎಂಬ ಪದವನ್ನು ಸೇರಿಸಿ ಸಾರುತ್ತಿರುವುದು ಕಂಡುಬರುತ್ತದೆ. ಜ್ಞಾನ ಶಬ್ದವು ‘ಜ್ಞಾ ಅವಬೋಧನೇ’ ಎಂಬ ಧಾತುವಿನಿಂದ ನಿಷ್ಪನ್ನವಾಗಿದ್ದು, ಪರಮಾತ್ಮ ವಿಷಯಕವಾದ ಜ್ಞಾನವನ್ನು ಸೂಚಿಸುತ್ತದೆ. ಇದರ ಜೊತೆಯಲ್ಲೇ ಉಪಯೋಗಿಸಲ್ಪಡುವ ‘ವಿಜ್ಞಾನ’ ಎಂಬ ಶಬ್ದದ ಅರ್ಥವೇನು? ಎನ್ನುವುದು ಜಿಜ್ಞಾಸ್ಯವಾದ ವಿಷಯ. ಕೆಲವರು ಜ್ಞಾನ-ವಿಜ್ಞಾನಗಳೆರಡೂ ಪರ್ಯಾಯ ಶಬ್ದಗಳೆಂದು ಭಾವಿಸುವರು. ಹಾಗೆ ಇವೆರಡೂ ಪರ್ಯಾಯ ಶಬ್ದಗಳಾಗಿದ್ದಲ್ಲಿ ಅನೇಕ ಕಡೆಗಳಲ್ಲಿ ಈ ಎರಡೂ ಶಬ್ದಗಳನ್ನೂ ಒಟ್ಟಿಗೆ ಪ್ರಯೋಗಿಸುತ್ತಿರಲಿಲ್ಲ. ಆದ್ದರಿಂದ ಇವೆರಡಕ್ಕೂ ಅರ್ಥಭೇದವಿರುವುದು ಸ್ಪಷ್ಟವಾಗುತ್ತದೆ.
ಸಂಸ್ಕೃತ ಭಾಷೆಯ ದೃಷ್ಟಿಯಿಂದ ವಿಜ್ಞಾನ ಪದವು ಜ್ಞಾನ ಪದಕ್ಕೆ ‘ವಿ’ ಎಂಬ ಉಪಸರ್ಗವನ್ನು ಸೇರಿಸಿರುವುದದಿಂದ ಉಂಟಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲವರು ವಿಜ್ಞಾನ ಎಂಬ ಪದಕ್ಕೆ ‘ವಿವಿಧಂ ಜ್ಞಾನಂ’ ಅಥವಾ ‘ವಿಶಿಷ್ಟಂ ಜ್ಞಾನಂ’ ಇತ್ಯಾದಿಯಾಗಿ ವ್ಯಾಖ್ಯಾನಿಸುತ್ತಾರೆ. ಈ ವಿವರಣೆ ವ್ಯಾಕರಣ ದೃಷ್ಟಿಯಿಂದ ಸರಿಯಾಗಿ ಇದ್ದರೂ, ವಿಜ್ಞಾನ ಎಂಬ ಪದದ ಗಹನವಾದ ಅರ್ಥವನ್ನು ಸಂಪೂರ್ಣವಾಗಿ ಮನದಟ್ಟು ಮಾಡಿಕೊಡುವಲ್ಲಿ ಸಫಲವಾಗುವುದಿಲ್ಲ ಎಂಬುದಾಗಿ ತೋರುತ್ತದೆ.
ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಮುಂದಿನ ಉದಾಹರಣೆಯು ಸಹಕಾರಿಯಾಗಬಹುದು. ಹಾಲಿಗೆ ಸ್ವಲ್ಪ ಮೊಸರನ್ನು ಸೇರಿಸಿ ಏಳು-ಎಂಟು ಗಂಟೆಗಳ ಕಾಲ ಇಟ್ಟಾಗ ಅದು ಮೊಸರಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ ಪ್ರಕ್ರಿಯೆಯನ್ನು ‘ಹೆಪ್ಪು ಹಾಕುವುದು’ ಎನ್ನುತ್ತಾರೆ. ಆದರೆ ಇಷ್ಟು ಮಾತ್ರ ತಿಳಿದುಕೊಂಡರೆ ನಮಗೆ ಉದ್ದಿಷ್ಟವಾದ ರೀತಿಯಲ್ಲಿ ಮೊಸರನ್ನು ಪಡೆಯಲು ಅವಕಾಶವಾಗುವುದಿಲ್ಲ. ಮೊದಲು ಹಾಲನ್ನು ಸಂಪೂರ್ಣವಾಗಿ ಕಾಯಿಸಿ ಅದನ್ನು ಉಗುರು ಬೆಚ್ಚಗಿನ ಉಷ್ಣತೆ ಹೊಂದುವವರೆಗೆ ಆರಿಸಿ, ಅನಂತರ ಅದಕ್ಕೆ ಸ್ವಲ್ಪ ಮೊಸರನ್ನು ಸೇರಿಸಬೇಕು. ಹೀಗೆ ಮೊಸರನ್ನು ಸೇರಿಸಬೇಕಾದರೆ ಹಾಲಿನ ಪ್ರಮಾಣವನ್ನು ನೋಡಿಕೊಂಡು ಅದಕ್ಕನುಗುಣವಾದ ಪ್ರಮಾಣದಲ್ಲಿ ಮೊಸರನ್ನು ಸೇರಿಸಬೇಕು. ಜೊತೆಗೆ ಮೊಸರು ಬಹಳ ಹುಳಿಯಾಗಿದ್ದರೆ, ಸಾಮಾನ್ಯವಾಗಿ ಸೇರಿಸುವುದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಸೇರಿಸಬೇಕು. ಅಂತೆಯೇ ಬಿಸಿಲು ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಕೇವಲ ಮೊಸರಿನಲ್ಲಿರುವ ಸೌಟನ್ನು ಹಾಲಿನಲ್ಲಿ ಅದ್ದಿದರೆ ಅಷ್ಟು ಮಾತ್ರದಿಂದಲೇ ಹಾಲು ಮೊಸರಾಗಿಬಿಡುತ್ತದೆ. ಹಾಗೆಯೇ ಅತ್ಯಂತ ಶೀತಮಯವಾದ ವಾತಾವರಣವಿರುವಾಗ ಒಂದು ಲೀಟರ್‍ನಷ್ಟು ಹಾಲಿಗೆ ಸುಮಾರು 20 ಮಿಲಿಯಷ್ಟು ಮೊಸರನ್ನು ಸೇರಿಸಿದರೆ ಮಾತ್ರ ಆ ಹಾಲು ಸರಿಯಾದ ಹದದಲ್ಲಿ ಮೊಸರಾಗುತ್ತದೆ. ಇದಲ್ಲದೆ ಎಮ್ಮೆಯ ಹಾಲಾದರೆ ಅಥವಾ ಹಸುವಿನ ಹಾಲಾದರೆ ಅದಕ್ಕನುಗುಣವಾದ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಈ ರೀತಿ ಕೇವಲ ಹೆಪ್ಪು ಹಾಕುವುದು ಎನ್ನುವ ಅಂಶಕ್ಕೆ ಸಂಬಂಧಪಟ್ಟಂತೆ ಸುಮಾರು 15-20 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅನುಸರಿಸಿದರೆ ಮಾತ್ರ ನಮಗೆ ಉದ್ದಿಷ್ಟವಾದ ಫಲವು ಸಿಗುತ್ತದೆ. ಅತ್ಯಂತ ಸ್ಥೂಲವಾದ ದೃಷ್ಟಿಯಿಂದ ಹೇಳುವುದಾದರೆ ಈ ಅಂಶಗಳನ್ನೇ ಹಾಲನ್ನು ಮೊಸರು ಮಾಡುವ ‘ವಿಜ್ಞಾನ’ ಎನ್ನಬಹುದಾಗಿದೆ.
ಲೌಕಿಕವಾದ ದೃಷ್ಟಿಯಲ್ಲಿ ಇದನ್ನು ಪರಿಚಯಿಸುವುದು ಸ್ವಲ್ಪ ಸುಲಭವಾದರೂ ಜ್ಞಾನ ಮತ್ತು ವಿಜ್ಞಾನ ಎಂಬ ಎರಡು ಪದಗಳ ಸನ್ನಿವೇಶದಲ್ಲಿ ‘ವಿಜ್ಞಾನ’ದ ಪರಿಚಯವನ್ನು ನೀಡುವುದು ಅತ್ಯಂತ ಕಠಿಣ. ಆದರೆ, ಕಠಿಣವಾದರೂ ಕೂಡ ಇದನ್ನು ಪರಿಚಯಿಸಿಕೊಳ್ಳುವುದು ಅನಿವಾರ್ಯವಾಗಿದೆ. ಮೇಲೆ ತಿಳಿಸಿದಂತೆ ಜ್ಞಾನವೆಂಬುದು ಮೋಕ್ಷಕ್ಕೆ ಸಾಧನವಾದಂತಹ ಪರಮಾತ್ಮ ಸಾಕ್ಷಾತ್ಕಾರ ಎಂಬುದಾಗಿ ಸ್ಥೂಲ ದೃಷ್ಟಿಯಿಂದ ಹೇಳಬಹುದಾದರೆ ಈ ರೀತಿಯಾದ ಪರಮಾತ್ಮ ಸಾಕ್ಷಾತ್ಕಾರವನ್ನು ಪಡೆಯುವ ವಿಧಾನ, ಪಡೆಯಲೋಸುಗ ನಡೆಸಬೇಕಾದ ಪ್ರಯತ್ನದ ವಿಧಿ-ವಿಧಾನಗಳು, ಹಾಗೆ ಪ್ರಯತ್ನಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು, ವರ್ಜಿಸಬೇಕಾದ ವಿಷಯಗಳು ಇತ್ಯಾದಿ ಅನೇಕ ವಿಷಯಗಳನ್ನು ಅಧ್ಯಾತ್ಮದ ‘ವಿಜ್ಞಾನ’ ಎಂದು ಒಂದು ದೃಷ್ಟಿಯಲ್ಲಿ ಕರೆಯಬಹುದು. ಆದರೆ ಈ ವಿಷಯಗಳನ್ನು ಕೇವಲ ‘ವಿಜ್ಞಾನ’ವೆಂದು ಕರೆಯದೆ ಅಧ್ಯಾತ್ಮವಿಜ್ಞಾನ ಎಂದು ನಮ್ಮ ಹಿರಿಯರು ವ್ಯವಹರಿಸಿರುವುದು ಅತ್ಯಂತ ಸೂಕ್ಷ್ಮವಾದ ಹಾಗೂ ಗಮನಾರ್ಹವಾದ ವಿಷಯ. ಒಬ್ಬ ಸಾಧಕನು ಸಂಪೂರ್ಣಸಿದ್ಧಿಯನ್ನು ಹೊಂದಬೇಕಾದರೆ ಅವನಿಗೆ ಅಧ್ಯಾತ್ಮವಿಜ್ಞಾನವು ಕರಗತವಾಗಿ ತನ್ಮೂಲಕವಾಗಿ ಮೋಕ್ಷಸಾಧನವಾದ ಪರಮಾತ್ಮ ಸಾಕ್ಷಾತ್ಕಾರರೂಪವಾದ ಜ್ಞಾನವು ಸಿದ್ಧಿಸಿರಬೇಕಾಗುತ್ತದೆ.
ನವi್ಮ ಭಾರತೀಯ ಆರ್ಷಸಂಸ್ಕೃತಿಯಲ್ಲಿ ಎಲ್ಲ ಅಂಶಗಳಿಗೂ ಅಧಿಷ್ಠಾತೃವಾದ ದೇವತೆಯುಂಟು. ಉದಾಹರಣೆಗೆ ಆಯುರ್ವೇದಕ್ಕೆ ಅಧಿಷ್ಠಾತೃ ದೇವತೆ ಧನ್ವಂತರಿ, ಸಂಗೀತ-ನಾಟ್ಯಗಳಿಗೆ ಸರಸ್ವತೀ ಇತ್ಯಾದಿ. ಅದೇ ರೀತಿ ಅಧ್ಯಾತ್ಮ ಜ್ಞಾನಕ್ಕೆ ಅಧಿಷ್ಠಾತೃ ದೇವತೆ ಪರಮೇಶ್ವರನ ರೂಪಾಂತರವಾದ ದಕ್ಷಿಣಾಮೂರ್ತಿಯಾದರೆ, ಅಧ್ಯಾತ್ಮವಿಜ್ಞಾನದ ಅಧಿಷ್ಠಾತೃ ದೇವತೆ ಶ್ರೀಮನ್ನಾರಾಯಣನ ಅವತಾರ ವಿಶೇಷವಾದ ‘ಹಯಗ್ರೀವ’. ಹಯಗ್ರೀವನೆಂದರೆ ಕುದುರೆಯ ಮುಖವುಳ್ಳ, ಮಾನವ ಶರೀರವುಳ್ಳ ಅತ್ಯಂತ ಸ್ತುತ್ಯವಾದ, ಪೂಜ್ಯವಾದ ಮೂರ್ತಿವಿಶೇಷ. ನಮ್ಮ ಪ್ರಾಚೀನಾರ್ಷ-ಸಾಹಿತ್ಯದಲ್ಲಿ ಹಯಗ್ರೀವಾವತಾರದ ಬಗ್ಗೆ ಹಾಗೂ ಹಯಗ್ರೀವಾವತಾರವು ಪ್ರತಿನಿಧಿಸುವ ತತ್ತ್ವದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ.
ಶ್ರೀಹಯಗ್ರೀವದೇವರ ವೈಶಿಷ್ಟ್ಯ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭುತ್ಥಾನಮಧರ್ಮಸ್ಯ ತದಾತ್ಮಾನಂ ಸೃಕಾಮ್ಯಹಮ್ ||
ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು ಅಪ್ಪಣೆ ಕೊಡಿಸಿರುವಂತೆ ಪರಮಾತ್ಮನಾದ ಶ್ರೀಮನ್ನಾರಾಯಣನು ಧರ್ಮದ ಅವನತಿಯನ್ನು ತಡೆದು ಮತ್ತೆ ಅದನ್ನು ಪುನರುಜ್ಜೀವಿಸುವ ಸಲುವಾಗಿ ಅನೇಕ ವಿಧವಾದ ಅವತಾರಗಳನ್ನು ಸ್ವೀಕರಿಸುತ್ತಾನೆ. ಈ ರೀತಿಯಾದ ವಿಷ್ಣುವಿನ ಅವತಾರಗಳಲ್ಲಿ ಮತ್ಸ್ಯ-ಕೂರ್ಮಾದಿ ದಶಾವತಾರಗಳು ಪ್ರಸಿದ್ಧವಾಗಿವೆ. ಈ ರೀತಿ ಸೃಷ್ಟಿಯ ವಿಕಾಸದ ದೃಷ್ಟಿಯಿಂದ ಈ ದಶಾವತಾರಗಳಿಗೆ ಬಹಳ ವಿಶೇಷವಾದ ಸ್ಥಾನವಿದ್ದು ಈ ಅವತಾರಗಳು ಎಲ್ಲರಿಂದಲೂ ಅಂಗೀಕೃತವಾಗಿವೆ. ಶ್ರೀಮದ್ಭಾಗವತಮಹಾಪುರಾಣದಲ್ಲಿ ಪರಮಾತ್ಮನಾದ ಶ್ರೀಮನ್ನಾರಾಯಣನ ಇಪ್ಪತ್ತನಾಲ್ಕು ಅವತಾರಗಳನ್ನು ಹೆಸರಿಸಿ ವಿವರಿಸಲಾಗಿದೆ. [ಇದಲ್ಲದೇ ಭಕ್ತಾನುಗ್ರಹಾರ್ಥವಾಗಿ ಪರಮಾತ್ಮನು ಅನಂತವಾದ ಅವತಾರಗಳನ್ನು ಎತ್ತುವನೆಂದೂ ನಮ್ಮ ಪ್ರಾಚೀನ-ಆರ್ಷ ಸಾಹಿತ್ಯದಲ್ಲಿ ಸ್ಪಷ್ಟವಾಗಿ ತಿಳಿಸಿದೆ.] ಈ ರೀತಿ ಪರಮಾತ್ಮನ ಇಪ್ಪತ್ತನಾಲ್ಕು ಅವತಾರಗಳಲ್ಲಿ ಹಯಗ್ರೀವವತಾರವು ಬಹಳ ಪ್ರಧಾನವಾದ ಅವತಾರವೆಂದರೆ ತಪ್ಪಾಗುವುದಿಲ್ಲ.
ಕೆಲವು ಸ್ಥಳಗಳಲ್ಲಿ ಹೇಳಿರುವಂತೆ ಹಯಗ್ರೀವಾವತಾರದ ಸಂಕ್ಷಿಪ್ತ ಕಥೆ ಇಂತಿದೆ: ಮಧುಕೈಟಭರೆಂಬ ಇಬ್ಬರು ರಾಕ್ಷಸರು ಚತುರ್ಮುಖಬ್ರಹ್ಮನ ಬಳಿಯಿಂದ ವೇದಗಳನ್ನು ಅಪಹರಿಸಿ ಅವುಗಳನ್ನು ಯಾರಿಗೂ ಸಿಗದಂತೆ ಗೂಢವಾದ ಸ್ಥಾನದಲ್ಲಿ ಇಟ್ಟುಬಿಟ್ಟರು. ಜ್ಞಾನರೂಪವಾದ ವೇದಗಳ ಸಾನಿಧ್ಯ-ಸಹಕಾರವಿಲ್ಲದೇ ಚತುರ್ಮುಖಬ್ರಹ್ಮನೂ ಕೂಡ ತನ್ನ ಸೃಷ್ಟಿ ಕಾರ್ಯದಲ್ಲಿ ತೊಡಗಲು ಅಸಮರ್ಥನಾದನು. ಇದರಿಂದ ಜಗತ್ತೆಲ್ಲವೂ ಅಂಧಕಾರಮಯವಾಯಿತು. ಇಂತಹ ಪರಿಸ್ಥಿತಿಯನ್ನು ನಿವಾರಿಸುವ ದೃಷ್ಟಿಯಿಂದ ಚತುರ್ಮುಖಬ್ರಹ್ಮನು ಪರಮಾತ್ಮನಾದ ಶ್ರೀಮನ್ನಾರಾಯಣನ ಮೊರೆಹೋದನು. ಆಗ ಶ್ರೀಮನ್ನಾರಾಯಣನು ಹಯಗ್ರೀವರೂಪನಾಗಿ ಅವತರಿಸಿ ಮಧುಕೈಟಭರೆಂಬ ರಾಕ್ಷಸರನ್ನು ಸಂಹರಿಸಿ ಮತ್ತೆ ವೇದಗಳನ್ನು ಉದ್ಧರಿಸಿ ಅವುಗಳನ್ನು ಚತುರ್ಮುಖಬ್ರಹ್ಮನಿಗೆ ನೀಡಿ ಅವನು ಎಂದಿನಂತೆ ತನ್ನ ಸೃಷ್ಟಿಕಾರ್ಯವನ್ನು ಮುಂದುವರೆಸಿಕೊಂಡು ಹೋಗಲು ಅನುವು ಮಾಡಿಕೊಟ್ಟನು ಎಂದು ತಿಳಿಯುತ್ತದೆ.
ಹಯಗ್ರೀವಾವತಾರದ ಬಗ್ಗೆ ಮಹಾಭಾರತದ ಶಾಂತಿಪರ್ವದ (ಮೋಕ್ಷಧರ್ಮವೆಂಬ ಉಪಪರ್ವದ) 375 ನೇ ಅಧ್ಯಾಯದಲ್ಲಿ ವಿಸ್ತಾರವಾದ ವರ್ಣನೆ ಇದೆ. ಸಹಸ್ರ ಉಪಾಖ್ಯಾನಗಳನ್ನು ಹೊಂದಿದೆ ಎಂದು ಪ್ರಸಿದ್ಧವಾಗಿರುವ ಮಹಾಭಾರತದಲ್ಲಿ ಹಯಗ್ರೀವಾವತಾರಕ್ಕೆ ಸಂಬಂಧಿಸಿದ ಉಪಾಖ್ಯಾನವು “ಹಯಶಿರ-ಉಪಾಖ್ಯಾನ” ಎಂದು ಪ್ರಸಿದ್ಧವಾಗಿದೆ. ಇದರಲ್ಲಿ ಹಯಗ್ರೀವಾವತಾರ ಅದರ ವೈಶಿಷ್ಟ್ಯ ಮತ್ತು ಪೂಜ್ಯತೆಗಳ ಬಗ್ಗೆ ವಿಸ್ತಾರವಾದ ಪ್ರಸ್ತಾವನೆ ಇದೆ.
ಮೇಲೆ ತಿಳಿಸಿರುವಂತೆ ಶ್ರೀಹಯಗ್ರೀವ ಮೂರ್ತಿಯು ವಿಜ್ಞಾನಾಧಿದೇವನಾಗಿ ವಿರಾಜಿಸುತ್ತಿದ್ದಾನೆ. (ಹದಿಮೂರನೆಯ ಶತಮಾನದಲ್ಲಿ ಉದಯಿಸಿದ) ವೇದಾಂತದೇಶಿಕರೆಂಬ ಮಹಾಜ್ಞಾನಿಗಳಾದ ಆಚಾರ್ಯಶ್ರೇಷ್ಠರು ಈ ಅವತಾರದ ಬಗ್ಗೆಯೇ ಒಂದು ವಿಸ್ತೃತವಾದ ಸ್ತೋತ್ರ ಸಾಹಿತ್ಯವನ್ನು ರಚಿಸಿ ಅದರಲ್ಲಿ ಹಯಗ್ರೀವ ದೇವರ ಮಹಿಮೆಯನ್ನೂ ಹಯಗ್ರೀವರ ಕೃಪೆಯಿಂದ ಉಂಟಾಗುವ ಆನುಕೂಲ್ಯವನ್ನು ಉತ್ತಮ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ.
ಈ ಸ್ತೋತ್ರದಲ್ಲಿ ಒಂದು ಶ್ಲೋಕವು ಈ ರೀತಿಯಾಗಿದೆ:
ವಿಶುದ್ಧವಿಜ್ಞಾನ-ಘನ-ಸ್ವರೂಪಂ ವಿಜ್ಞಾನವಿಶ್ರಾಣನ-ಬದ್ಧದೀಕ್ಷಂ |
ದಯಾನಿಧಿಂ ದೇಹಭೃತಾಂ ಶರಣ್ಯಂ ದೇವಂ ಹಯಗ್ರೀವಂ ಅಹಂ ಪ್ರಪದ್ಯೇ || ಎಂದು.
ಮೇಲೆ ತಿಳಿಸಿದಂತೆ ಇಲ್ಲಿರುವ ವಿಜ್ಞಾನಶಬ್ದವು ಅಧ್ಯಾತ್ಮವಿಜ್ಞಾನವನ್ನು ಸೂಚಿಸುತ್ತದೆ. ಪರಮಾತ್ಮನಾದ ಶ್ರೀಹಯಗ್ರೀವರ ಶ್ರೀವಿಗ್ರಹವು ಪರಮಶುದ್ಧವಾದ ವಿಜ್ಞಾನವೇ ಮೂರ್ತಿವೆತ್ತ ಸ್ವರೂಪ. ಇದನ್ನೇ ಸಂಸ್ಕೃತದಲ್ಲಿ “ವಿಜ್ಞಾನಘನ” ಎನ್ನಲಾಗುತ್ತದೆ. ಇಂತಹ ವಿಜ್ಞಾನಾತ್ಮಕವಾಗಿರುವ ಶ್ರೀಹಯಗ್ರೀವದೇವರು ಅವನ ಭಕ್ತರೆಲ್ಲರಿಗೂ ನೀಡುವ ಅನುಗ್ರಹ ಯಾವ ರೂಪವಾಗಿರುತ್ತದೆ ಎಂದರೆ ಅದು ‘ಅಧ್ಯಾತ್ಮ-ವಿಜ್ಞಾನದ’ ಅನುಗ್ರಹವಾಗಿರುತ್ತದೆ. ಅಧ್ಯಾತ್ಮ-ವಿಜ್ಞಾನವನ್ನು ನೀಡುವುದೇ ಪರಮಾತ್ಮನ ಈ ಅವತಾರದ ಮುಖ್ಯವಾದ ಉದ್ದೇಶ. ಸಂಸಾರದಲ್ಲಿ ತಾಪತ್ರಯಪರಾಹತರಾಗಿರುವ ಜನರೆಲ್ಲರಿಗೂ ತನ್ನ ನಿರ್ಹೇತುಕವಾದ ಕೃಪೆಯಿಂದ ಅಧ್ಯಾತ್ಮವಿಜ್ಞಾನದ ತಂಪನ್ನು ನೀಡಿ ಅವನನ್ನು ರಕ್ಷಿಸುವುದೇ ಈ ಹಯಗ್ರೀವಾವತಾರದ ಮುಖ್ಯವಾದ ಉದ್ದೇಶ ಎನ್ನುವುದು ಈ ಶ್ಲೋಕದ ಸಾರ.
ವ್ಯಾಖ್ಯಾಮುದ್ರಾಂ ಕರಸರಸಿಜೈಃ ಪುಸ್ತಕಂ ಶಂಖಚಕ್ರೇ ಬಿಭ್ರದ್ ಭಿನ್ನಸ್ಫುಟಿಕರುಚಿರೇ ಪುಂಡರೀಕೇ ನಿಷಣ್ಣಃ |
ಅಮ್ಲಾನಶ್ರೀಃ ಅಮೃತವಿಶದೈಃ ಅಂಶುಭಿಃ ಪ್ಲಾವಯನ್ಮಾಮ್ ಆವಿರ್ಭೂಯಾತ್ ಅನಘಮಹಿಮಾ ಮಾನಸೇ ವಾಗಧೀಶಃ ||
ಪರಮಾತ್ಮನಾದ ಶ್ರೀಹಯಗ್ರೀವರಿಗೆ ವಾಗೀಶ ಎಂಬ ಮತ್ತೊಂದು ಹೆಸರು. ಎಲ್ಲಾ ಭಾಷಾಮಯವಾದ ವಾಕ್ಕಿಗೆ ಅಧಿದೇವನಾದವನು ಹಯಗ್ರೀವ. ಸಾಮಾನ್ಯವಾಗಿ ಸರಸ್ವತಿಯನ್ನು ವಾಗಧಿದೇವತೆ ಎಂದು ತಿಳಿಸಲಾಗುತ್ತದೆ. ಆದರೆ ಸರಸ್ವತಿಯೂ ಕೂಡ ಹಯಗ್ರೀವ ದೇವರನ್ನು ಕುರಿತು ತಪಸ್ಸು ಮಾಡಿ ಅವನ ಅನುಗ್ರಹದಿಂದ ಆ ಒಂದು ಪದವಿಯನ್ನು ಪಡೆದಳು ಎಂದು ಮೂಲಗ್ರಂಥಗಳಲ್ಲಿ ಸ್ಪಷ್ಟವಾಗಿ ತಿಳಿಸಿದುರುವುದರಿಂದ ವಾಕ್‍ತತ್ತ್ವದ ಪರಮೋನ್ನತವಾದ ದೇವತೆ ಶ್ರೀಹಯಗ್ರೀವನೇ ಆಗಿರುತ್ತಾನೇ ಎನ್ನುವ ಅಂಶವನ್ನು ಸೂಚಿಸಲು ಆಚಾರ್ಯವರ್ಯರು ಈ ಮೇಲಿನ ಶ್ಲೋಕದಲ್ಲಿ ವಾಗಧೀಶಃ ಎಂಬುದಾಗಿ ಹೇಳಿದ್ದಾರೆ.
ಶ್ರೀಹಯಗ್ರೀವರ ಮೂರ್ತಿ ಅನೇಕ ವಿಷ್ಣುದೇವಾಲಯಗಳಲ್ಲಿ ಪ್ರಧಾನಮೂರ್ತಿಯಾಗಿ ಪೂಜ್ಯವಾಗಿವೆ. ಹಾಗೆಯೇ ಲಕ್ಷ್ಮಿಯನ್ನು ತನ್ನ ಎಡಭಾಗದಲ್ಲಿ ಕುಳ್ಳಿರಿಸಿಕೊಂಡು, ಬಿಳಿಯ ಕಮಲದಲ್ಲಿ ಚಂದ್ರಮಂಡಲದಿಂದ ಆವೃತನಾಗಿರುವ ಶ್ರೀಹಯಗ್ರೀವ ದೇವರ ಚಿತ್ರವೂ ಕೂಡ ಅನೇಕ ಮನೆಗಳ ದೇವರ ಗೃಹದಲ್ಲಿ ನಮಗೆ ಕಾಣಸಿಗುತ್ತದೆ. ಇದರಲ್ಲಿ ಶ್ವೇತಾರವಿಂದ ಎಂದು ಕರೆಯಲ್ಪಡುವ ಬಿಳಿಯ ಕಮಲವು ಪರಮೋನ್ನತವಾದ, ನಿಷ್ಕಲ್ಮಷವಾದ ಹಾಗೂ ಪರಮಪರಿಶುದ್ಧವಾದ ಜ್ಞಾನವನ್ನು ಸೂಚಿಸುತ್ತದೆ. ಹಾಗೆಯೇ ಹಯಗ್ರೀವರ ಸುತ್ತಲೂ ಇರುವ ಚಂದ್ರಬಿಂಬದ ಆವರಣವೂ ಕೂಡ ಬಿಳಿಯಬಣ್ಣದ್ದಾಗಿದ್ದು ಅದೂ ಸಹ ಅಜ್ಞಾನವೆಂಬ ಅಂಧಕಾರವನ್ನು ಹೊಡದೋಡಿಸಿ ಅಧ್ಯಾತ್ಮವಿಜ್ಞಾನವೆಂಬ ಅತ್ಯಂತ ತಂಪನ್ನು ನೀಡುವ ಆತ್ಮಜ್ಞಾನದ ಒಂದು ಪ್ರಧಾನವಾದ ಮಜಲವನ್ನು ಬಿಂಬಿಸುತ್ತದೆ. ಹಾಗೆಯೇ ಪರಮಾತ್ಮನು ಒಂದು ಕೈಯಲ್ಲಿ ವ್ಯಾಖ್ಯಾನಮುದ್ರೆ ಎಂದು ಕರೆಯಲ್ಪಡುವ ಜೀವ-ದೇವರ ಸಂಗಮವಾದ ಚಿನ್ಮುದ್ರೆಯು ದರ್ಶನಕ್ಕೆ ವಿಷಯವಾಗುತ್ತದೆ. ಮತ್ತೊಂದು ಕೈಯಲ್ಲಿ ಜ್ಞಾನ-ವಿಜ್ಞಾನಗಳಿಗೆ ಸೂಚಕವಾದಂತಹ ಪುಸ್ತಕವು ದೃಗ್ಗೋಚರವಾಗುತ್ತದೆ. ಇನ್ನು ಶುದ್ಧವಾದ ಪರಾಪ್ರಕೃತಿಯನ್ನು ಪ್ರತಿಬಿಂಬಿಸುವ ವಿಷ್ಣುಶಕ್ತಿಯಾಗಿರುವ ಮಹಾಲಕ್ಷ್ಮಿಯು ಶ್ರೀಹಯಗ್ರೀವರ ಎಡಭಾಗದಲ್ಲಿ ಆಸೀನಳಾಗಿದ್ದು ಭಕ್ತಾನುಗ್ರಹವೆಂಬ ಪರಮಾತ್ಮನ ಕಾರ್ಯದಲ್ಲಿ ಪ್ರೇರಿಸಿ ಪೆÇೀಷಿಸಿ ಸಹಕರಿಸುತ್ತಿದ್ದಾಳೆ. ಇದಲ್ಲದೇ ವಿಷ್ಣುವಿನ ಅಸಾಧಾರಣವಾದ ಚಿಹ್ನೆಗಳಾದ ಶಂಖ ಚಕ್ರಗಳನ್ನೂ ಸಹ ಶ್ರೀಹಯಗ್ರೀವದೇವರು ಧರಿಸಿ ತನ್ಮೂಲಕವಾಗಿಯೂ ಕೂಡ ಭಕ್ತಾನುಗ್ರಹವನ್ನು ಮಾಡುತ್ತಿರುವುದು ಶ್ರೀಹಯಗ್ರೀವಮೂರ್ತಿಯ ಸೂಕ್ಷ್ಮದರ್ಶನವನ್ನು ಮಾಡುವ ಭಕ್ತಶ್ರೇಷ್ಠರಿಗೆ ತಿಳಿಯುವ ವಿಷಯ. ಈ ಎಲ್ಲಾ ಅಂಶಗಳನ್ನೂ ಸಹ ಆಚಾರ್ಯಶ್ರೇಷ್ಠರಾದ ವೇದಾಂತದೇಶಿಕರು ಈ ಮೇಲಿನ ಶ್ಲೋಕದಲ್ಲಿ ಸ್ಪಷ್ಟವಾಗಿ ತಿಳಿಸಿರುತ್ತಾರೆ.
ಇನ್ನು, ಅನೇಕ ತಂತ್ರಶಾಸ್ತ್ರ ಗ್ರಂಥಗಳಲ್ಲಿಯೂ ಕೂಡ ಮೇಲಿನಂತೆಯೇ ಶ್ರೀಹಯಗ್ರೀವದೇವರ ಉತ್ತಮವಾದ ವರ್ಣನೆಯು ನಮಗೆ ಕಾಣಸಿಗುತ್ತದೆ. ಅವುಗಳಲ್ಲಿ ಒಂದು ಶ್ಲೋಕ ಇಂತಿದೆ:
ವಂದೇ ಪೂರಿತಚಂದ್ರಮಂಡಲಗತಂ ಶ್ವೇತಾರವಿಂದಾಸನಮ್ ಮಂದಾಕಿನ್ಯಮೃತಾಬ್ಜಕುಂದಕುಮುದ-ಕ್ಷೀರೇಂದುಹಾಸಂ ಹರಿಂ |
ಮುದ್ರಾಪುಸ್ತಕಶಂಖಚಕ್ರವಿಧೃತಃ ಶ್ರೀಮದ್ಭುಜಾಮಂಡಲಂ ನಿರ್ಯನ್ನಿರ್ಮಲಭಾರತೀಪರಿಮಲಂ ವಿಶ್ವೇಶ್ವಂ ಅಶ್ವಾನನಂ ||
ಎಂಬ ಈ ಶ್ಲೋಕದಲ್ಲಿ ಹೇಳಿರುವ ಅಂಶಗಳನ್ನೇ ಆಚಾರ್ಯ ಶ್ರೇಷ್ಠರಾದ ವೇದಾಂತದೇಶಿಕರು ಮೇಲಿನ ತಮ್ಮ ಶ್ಲೋಕದಲ್ಲಿ ವಿವರಿಸಿರುತ್ತಾರೆ. ಇದಲ್ಲದೇ ಪ್ರತಿನಿತ್ಯವೂ ಕೂಡ ವಿದ್ಯಾರಂಭದಲ್ಲಿ ಹಾಗೂ ಪಾಠದ ಕೊನೆಯಲ್ಲಿ ತಪ್ಪದೇ ಹಯಗ್ರೀವ ದೇವರ ಧ್ಯಾನಶ್ಲೋಕವನ್ನು ಪಠಿಸುವ ವಾಡಿಕೆ ಇದೆ. ಆ ಶ್ಲೋಕವು ಹೀಗಿದೆ:
ಜ್ಞಾನಾನಂದಮಯಂ ದೇವಂ ನಿರ್ಮಲ ಸ್ಫಟಿಕಾಕೃತಿಂ | ಆಧಾರಂ ಸರ್ವವಿದ್ಯಾನಾಂ ಹಯಗ್ರೀವಮುಪಾಸ್ಮಹೇ ||
ಈ ಶ್ಲೋಕದಲ್ಲಿಯೂ ಕೂಡ ಮೇಲೆ ತಿಳಿಸಿರುವಂತೆ ಶ್ರೀಹಯಗ್ರೀವದೇವರ ವರ್ಣನೆಯನ್ನೆ ಮಾಡಲಾಗಿದೆ ಹಾಗೂ ಹಯಗ್ರೀವದೇವರು ಸಕಲ ವಿದ್ಯೆಗಳಿಗೂ ಆಧಾರವಾದ ಅಂಶವನ್ನು ಒತ್ತಿಹೇಳಲಾಗಿದೆ.
ಇದಲ್ಲದೇ ಅಧ್ಯಾತ್ಮ ಜ್ಞಾನ-ವಿಜ್ಞಾನಗಳು ನಮಗೆ ಸಿದ್ಧಿಸಬೇಕಾದರೆ ಹಯಗ್ರೀವ ಮಂತ್ರ ಜಪವು ವಿಹಿತವಾಗಿವೆ. ಈ ಮಂತ್ರದ ಸ್ವರೂಪವನ್ನೂ, ಅರ್ಥ ಹಾಗೂ ವೈಶಿಷ್ಟ್ಯಗಳನ್ನು ಹಯಗ್ರೀವೋಪನಿಷತ್ ಎಂಬ ಕಿರಿದಾದ ಉಪನಿಷತ್ತಿನಲ್ಲಿ ತಿಳಿಸಲಾಗಿದೆ.
ಇದಲ್ಲದೇ ಎಲ್ಲ್ಲ ಪುರಾಣಗಳಿಗಿಂತ ಶ್ರೇಷ್ಠತಮವಾದ ಪುರಾಣವಾದ ಶ್ರೀಮದ್ಭಾಗವತಮಹಾಪುರಾಣಕ್ಕೆ ಹಯಗ್ರೀವಬ್ರಹ್ಮವಿದ್ಯಾ ಎಂಬುದಾಗಿ ಹೆಸರಿರುವುದು ನಮಗೆ ಭಾಗವತಾಧ್ಯಯನದಿಂದ ತಿಳಿಯುತ್ತದೆ. ಶ್ರೀಮದ್ಭಾಗವತದಲ್ಲಿಯೂ ಕೂಡ ಶ್ರೀಹಯಗ್ರೀವದೇವರ ವಿಶಿಷ್ಟವಾದ ವರ್ಣನಾದಿಗಳು ನಮಗೆ ಕಾಣಸಿಗುತ್ತದೆ. ಇದರ ಜೊತೆಗೆ ಶ್ರೀಮದ್ಭಾಗವತದಲ್ಲಿ ಅಧ್ಯಾತ್ಮವಿಜ್ಞಾನದ ಬಗ್ಗೆ ಅನೇಕ ವಿಸೇಷಾಂಶಗಳು ನಮಗೆ ಅಲ್ಲಲ್ಲಿ ಕಾಣಸಿಗುತ್ತದೆ.
ಉಪನಿಷತ್ತುಗಳನ್ನು ನಾವು ಅವಲೋಕಿಸಿದಾಗ ಅವುಗಳಲ್ಲಿ ಜೀವ-ಪರಮಾತ್ಮರಿಗೆ ಭೇದವನ್ನು ಪ್ರತಿಪಾದಿಸುವ ಅನೇಕ ವಾಕ್ಯಗಳೂ ಹಾಗೆಯೇ ಅಭೇದವನ್ನು ಪ್ರತಿಪಾದಿಸುವ ಅನೇಕ ವಾಕ್ಯಗಳೂ ನಮಗೆ ಕಾಣಸಿಗುತ್ತವೆ. ಹಾಗೆಯೇ ಉಪನಿಷತ್ತುಗಳಲ್ಲಿ ಇನ್ನೂ ಅನೇಕ ಪರಸ್ಪರವಿರೋಧಗಳು ಇರುವಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಮೇಲ್ನೋಟಕ್ಕೆ ಕಾಣುವ ಎಲ್ಲಾ ವಿರೋಧಗಳನ್ನು ಪರಿಹರಿಸುವ ಸಲುವಾಗಿಯೇ ಶ್ವೇತಾಶ್ವತರೋಪನಿಷತ್ ಎಂಬ ಉಪನಿಷತ್ತಿನ ಅವತಾರವಾಗಿವೆ ಎನ್ನುವುದು ಜ್ಞಾನಿಗಳ ಅಭಿಪ್ರಾಯ. ಈ ಉಪನಿಷತ್ತಿನಲ್ಲಿ ಪರಮಾತ್ಮಸ್ವರೂಪನಾದ ಋಷಿಯೊಬ್ಬರು ಹಯಗ್ರೀವರೂಪಿಯಾಗಿ ಅವತರಿಸಿ ಈ ಉಪನಿಷತ್ತನ್ನು ಉಪದೇಶಿಸಿದರು ಎಂದು ಆರಂಭದಲ್ಲಿ ತಿಳಿಸಲಾಗಿದೆ. ಅಂದರೆ ಶ್ರೀಹಯಗ್ರೀವದೇವರೇ ಈ ಉಪನಿಷತ್ತಿನ ಉಪದೇಶಕರು ಎಂಬ ತಾತ್ಪರ್ಯ ಸ್ಪಷ್ಟವಾಗುತ್ತದೆ. ಜೀವ-ಪರಮಾತ್ಮರಿಗೆ ಭೇದವಿರುವುದೇ ಅಥವಾ ಅಭೇದವಿರುವುದೇ ಎಂಬ ವಿಷಯವನ್ನು ಕೇವಲ ವಚನಗಳ ಆಧಾರದ ಮೇಲೆ ತೀರ್ಮಾನಿಸಲು ಸಾಧ್ಯವಿಲ್ಲ. ಅಧ್ಯಾತ್ಮವಿಜ್ಞಾನದ ಮೊರೆ ಹೋಗುವುದರಿಂದ ಮಾತ್ರ ಈ ಸಮಸ್ಯೆಯನ್ನು ನಾವು ಸರಿಯಾದ ರೀತಿಯಲ್ಲಿ ಪರಿಹರಿಸಬಹುದು ಎನ್ನುವುದು ಇಲ್ಲಿ ತಿಳಿಸಿರುವ ಅಭಿಪ್ರಾಯ. ಹಾಗಾದರೇ ಇಲ್ಲಿ ಜೀವ-ಪರಮಾತ್ಮರಿಗೆ ಭೇದವೆಂದು ತಿಳಿಸಿಲಾಗಿದೆಯೇ ಅಥವಾ ಅಭೇದವೇ ಎಂಬ ಪ್ರಶ್ನೆ ಬಂದಾಗ ಈ ರೀತಿಯಾಗಿ ಹೇಳಲಾಗಿದೆ.
‘ಸರ್ವವ್ಯಾಪಿನಮಾತ್ಮಾನಂ ಕ್ಷೀರೇ ಸರ್ಪಿರಿವಾರ್ಪಿತಂ’
‘ತಿಲೇಷು ತೈಲಂ ದಧಿನೀವ ಸರ್ಪಿಃ, ಆಪಸ್ಸ್ರೋತಸ್ಸು, ಅರಣೀಷು ಚಾಗ್ನಿಃ’
ಇತ್ಯಾದಿಯಾಗಿ ಹೇಳಿರುವಂತೆ, ಪರಮಾತ್ಮನು ಈ ಜೀವಾತ್ಮನಲ್ಲಿ ಗ್ರಹಿಸಲ್ಪಡುತ್ತಾನೆ. ಎಳ್ಳಿನಲ್ಲಿ ಎಣ್ಣೆ ಇರುವಂತೆ, ಹಾಲಿನಲ್ಲಿ ತುಪ್ಪವು ಅಡಗಿರುವಂತೆ, ಅರಣಿಯಲ್ಲಿ ಅಗ್ನಿಯು ಅಡಗಿರುವಂತೆ ಈ ಪರಮಾತ್ಮನು ಜೀವಾತ್ಮನಲ್ಲಿ ಸೂಕ್ಷ್ಮರೂಪವಾಗಿ ಅಡಗಿದ್ದಾನೆ ಎಂದು ಹೇಳಿ ಜೀವ-ಪರಮಾತ್ಮರ ಭೇದ-ಅಭೇದದ ವಿಷಯವನ್ನು ಈ ಉಪನಿಷತ್ತಿನಲ್ಲಿ ವಿವರಿಸಲಾಗಿದೆ. ಹಾಲಿನಲ್ಲಿ ಕೈಹಾಕಿ ನೋಡಿದರೆ ತುಪ್ಪವು ಸಿಗುವುದಿಲ್ಲ. ಹಾಲನ್ನು ಚೆನ್ನಾಗಿ ಕಾಯಿಸಿ, ಅದನ್ನು ಹೆಪ್ಪು ಹಾಕಿ, ಮೊಸರು ಮಾಡಿ, ಆ ಮೊಸರಿನ ಕೆನೆಪದರವನ್ನು ತೆಗೆದು ಚೆನ್ನಾಗಿ ಕಡೆದು, ಅದರಿಂದ ಬೆಣ್ಣೆಯನ್ನು ತೆಗೆದು ಅದನ್ನು ಕಾಯಿಸಿದಾಗ ಹಾಲಿನಲ್ಲಿರುವ ತುಪ್ಪ ನಮ್ಮ ಉಪಯೋಗಕ್ಕೆ ಸಿಗುತ್ತದೆ. ಹಾಗೆಯೇ ಈ ಜೀವಾತ್ಮನಲ್ಲಿಯೇ ಅಡಗಿರುವ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಧ್ಯಾನವೆಂಬ ಕಡೆಯುವಿಕೆ(ಮಂಥನ)ಯನ್ನು ಮಾಡಿ ಅದರಿಂದ ಆ ಸಾಕ್ಷಾತ್ಕಾರವನ್ನು ಪಡೆಯಬೇಕು ಎನ್ನುವುದೇ ಅಧ್ಯಾತ್ಮವಿಜ್ಞಾನದ ಮೂಲತಳಹದಿ. ಇಲ್ಲಿ ಹಾಲಿಗೂ ತುಪ್ಪಕ್ಕೂ ಭೇದವೇ ಅಥವಾ ಅಭೇದವೇ ಎಂದು ಪ್ರಶ್ನಿಸಿದಾಗ ಹಾಲಿನಲ್ಲಿಯೇ ಅನಭಿವ್ಯಕ್ತವಾಗಿ ತುಪ್ಪವು ಸೇರಿಕೊಂಡಿರುವುದರಿಂದ ಅಭೇದವೆಂದು ಹೇಳಬಹುದು. ಆದರೆ ತುಪ್ಪವನ್ನು ಕೊಡು ಎಂದು ಹೇಳಿದಾಗ ಹಾಲನ್ನು ನೀಡಿದರೆ ‘ನಾನು ಕೇಳಿದ್ದು ತುಪ್ಪವನ್ನು ಹಾಲನ್ನಲ’್ಲ ಎಂಬ ಪ್ರತಿಕ್ರಿಯೆ ಬರುತ್ತದೆ. ಆದ್ದರಿಂದ ಹಾಲಿಗೂ ತುಪ್ಪಕ್ಕೂ ಭೇದವಿದೆ ಎಂಬ ಅಂಶವೂ ಸ್ಪಷ್ಟವಾಗಿ ತಿಳಿಯುತ್ತದೆ. ತಾತ್ಪರ್ಯವನ್ನು ಹೇಳುವುದಾದರೆ ‘ಈ ಭೇದಾಭೇದಗಳ ಚರ್ಚೆಯಲ್ಲಿ ತೊಡಗದೇ ಮನುಷ್ಯನು ಪರಮಾತ್ಮ ಧ್ಯಾನದಲ್ಲಿ ನಿರತನಾಗಿ ಅವನನ್ನು ಅಧ್ಯಾತ್ಮವಿಜ್ಞಾನದ ಮೂಲಕ ತಿಳಿದುಕೊಳ್ಳಬೇಕು’ ಎಂಬುದು ವಿಜ್ಞಾನಾಧಿದೇವನಾದ ಶ್ರೀಹಯಗ್ರೀವದೇವರು ಈ ಉಪನಿಷತ್ತಿನ ಮೂಲಕ ನಮಗೆ ನೀಡುತ್ತಿರುವ ಸಂದೇಶ.
ಈ ಅಂಶವನ್ನೇ ಉಪನಿಷತ್ತುಗಳಲ್ಲಿ “ವಿಜ್ಞಾನೇನ ಆತ್ಮಾನಂ ವೇದಾಯತೇ” ಎಂದು ಅಧ್ಯಾತ್ಮವಿಜ್ಞಾನದ ಮೂಲಕವೇ ಪರಮಾತ್ಮನ ಸಾಕ್ಷಾತ್ಕಾರವು ಸಾಧ್ಯ ಎಂದು ಘಂಟಾಘೋಷವಾಗಿ ತಿಳಿಸುತ್ತದೆ.
ಈ ರೀತಿ ಹಯಗ್ರೀವದೇವರ ವೈಶಿಷ್ಟಗಳು ಅನೇಕ. ಮೇಲೆ ಹೇಳಿದಂತೆ ‘ಹಯ’ ಎಂದರೆ ಕುದುರೆ. ಕುದುರೆಯು ಜ್ಞಾನದ ಪ್ರತೀಕ. ಆದರಿಂದ ಈ ದೇವರಿಗೆ ಈ ರೂಪ ಎನ್ನುವುದು ಈ ಪರಮಾತ್ಮನ ಸ್ವರೂಪದ ಸಂಕ್ಷಿಪ್ತ ವೈಶಿಷ್ಟ್ಯ.
ಭಾರತೀಯ ಸಂಸ್ಕೃತಿಯಲ್ಲಿ ಕುದುರೆ
ಇದಲ್ಲದೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕುದುರೆ ಎಂಬ ಪ್ರಾಣಿಗೆ ಅನೇಕ ವೈಶಿಷ್ಟ್ಯಗಳುಂಟು. ಮನುಸ್ಮೃತಿಯಲ್ಲಿ ಹೇಳಿರುವಂತೆ “ಗಜಾಶ್ವಾಃ ಮುಖತಃ ಮೇಧ್ಯಾಃ” ಎಂದು ಇವುಗಳಿಗೆ ಮುಖದಲ್ಲಿ ಪೂಜೆಯನ್ನು ಮಾಡುತ್ತೇವೆ. ರಾಜಮಹಾರಾಜರ ಮೆರವಣಿಗೆಯಲ್ಲಿ ಕುದುರೆಯನ್ನು ಮೊದಲು ಕಳುಹಿಸಲಾಗುತ್ತದೆ. ಹಾಗೆಯೇ ರಾಜಾಸ್ಥಾನಗಳಲ್ಲಿ ‘ಪಟ್ಟದ ಕುದುರೆ’ ಎಂಬ ಒಂದು ಅತ್ಯಂತ ಶ್ರೇಷ್ಠವಾದ ಕುದುರೆ ಇರುತ್ತದೆ. ಹಾಗೆಯೇ ದೇವಲೋಕದ ವರ್ಣನೆಯನ್ನು ಮಾಡುವಾಗ ದೇವಾದಿರಾಜನಾದ ಇಂದ್ರನ ಪಟ್ಟದ ಕುದುರೆಯನ್ನು ಉಚ್ಚೈಶ್ರವಸ್ ಎಂಬುದಾಗಿ ಹೆಸರಿಸಿ ವರ್ಣಿಸಲಾಗುತ್ತಿದೆ. ಈ ಅತ್ಯಂತ ಶ್ರೇಷ್ಠವಾದ ಕುದುರೆಯು, ಅಮೃತಕ್ಕಾಗಿ ದೇವತೆಗಳು ಹಾಗೂ ಅಸುರರು ಕ್ಷೀರಸಮುದ್ರವನ್ನು ಕಡೆದಾಗ ಅದರಿಂದ ಆವಿರ್ಭವಿಸಿತು ಎಂಬುದಾಗಿ ಪುರಾಣಗಳಲ್ಲಿ ಉಕ್ತವಾಗಿರುವುದನ್ನು ಕೇಳುತ್ತೇವೆ. ಈ ರೀತಿ ವೇದಗಳಿಂದ ಆರಂಭಿಸಿ ಇತಿಹಾಸ, ಪುರಾಣ, ಧರ್ಮಶಾಸ್ತ್ರಗಳಲ್ಲಿ ಕುದುರೆಯ ಬಗ್ಗೆ ಬಹಳ ವಿಶೇಷವಾದ ವರ್ಣನೆಗಳು ನಮಗೆ ಕಾಣಸಿಗುತ್ತವೆ. ಇದಲ್ಲದೆ ವಿಷ್ಣುದೇವಾಲಯಗಳಲ್ಲಿ ಉತ್ಸವ ಮೂರ್ತಿಯನ್ನು ಕುದುರೆ ವಾಹನದಲ್ಲಿ ಬಿಜಯಮಾಡಿಸಿ ಉತ್ಸವವನ್ನು ಊರಿನ ಬೀದಿಬೀದಿಗಳಲ್ಲಿ ಮಾಡುವುದು ಇಂದಿಗೂ ಸಹ ಪ್ರಚಲಿತವಾಗಿವೆ. ಈ ಉತ್ಸವವನ್ನೂ ಸಹ ಮೇಲೆ ಹೇಳಿದ ಕುದುರೆಯ ವೈಶಿಷ್ಟ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ದರ್ಶಿಸಿದಾಗ ಅದು ನಮ್ಮಲ್ಲಿ ಅಧ್ಯಾತ್ಮ ಪ್ರಗತಿಯ ಯಾವ ರೀತಿಯಾದ ಪರಿಣಾಮವನ್ನು ಮಾಡಬೇಕೋ ಅದನ್ನು ಮಾಡುತ್ತದೆ ಎಂಬ ಅಂಶವು ಗಮನಾರ್ಹ.
ಇನ್ನು ಲೌಕಿಕವಾದ ವಿಜ್ಞಾನದಲ್ಲಿಯೂ ಕೂಡ ವಿಶಿಷ್ಟವಾದ ಶಕ್ತಿಯನ್ನು ಬಿಂಬಿಸಲು ಕುದುರೆಯ ಸ್ವರೂಪದ ಸಹಕಾರವನ್ನು ಪಡೆಯಲಾಗುತ್ತದೆ. ಯಂತ್ರಗಳ ಸಾಮರ್ಥ್ಯವನ್ನು ತಿಳಿಸುವಾಗ ‘ಇಷ್ಟು ಸಂಖ್ಯೆಯ “ಹಾರ್ಸ್ ಪವರ್”’ ಎಂಬ ಶಬ್ದವನ್ನು ಉಪಯೋಗಿಸಲಾಗುತ್ತದೆ.
ಉಪಸಂಹಾರ
ಈ ರೀತಿಯಾಗಿ ಭಾರತೀಯ ಸಂಸ್ಕೃತದಲ್ಲಿ ಕುದುರೆಯ ವೈಶಿಷ್ಟ್ಯವನ್ನೂ ಆ ಪ್ರಾಣಿಯ ಮುಖವನ್ನುಳ್ಳ ಪರಮಾತ್ಮನಾದ ಶ್ರೀಹಯಗ್ರೀವರ ವೈಶಿಷ್ಟ್ಯವನ್ನು ಸಂಕ್ಷಿಪ್ತವಾದ ರೀತಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ ದೋಷಗಳಿದ್ದರೆ ಅವುಗಳನ್ನು ತ್ಯಜಿಸಿ ಗುಣಗಳಿದ್ದರೆ ಅವುಗಳನ್ನು ಗ್ರಹಿಸಿ ಹಿರಿಯರೆಲ್ಲರೂ ಆಶೀರ್ವಾದಿಸಬೇಕೆಂದು ಈ ಲೇಖನದ ಲೇಖಕನ ವಿನಯಪೂರ್ವಕವಾದ ಅರಿಕೆಯಾಗಿದೆ.
Featured Image: TemplePurohit