Ram Mandir A Civilisations Sacred Space
 
ರಾಮ ಮಂದಿರ – ಒಂದು ನಾಗರಿಕತೆಯ ಪವಿತ್ರ ಸ್ಥಳ

ನಾವು ಇಂದು ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಒಮ್ಮತ ಮೂಡಿಸುವಲ್ಲಿ ವಿಫಲವಾಗಿದ್ದೇವೆ. ತನ್ನ ಪುರಾತನ ಪವಿತ್ರ ಸ್ಥಳಗಳನ್ನು ಉಳಿಸಿಕೊಳ್ಳಲಾಗದ ದೇಶ ಅಡಿಪಾಯ ಇಲ್ಲದ ಮನೆಯಂತೆ.

ಒಂದು ಹಿಂದೂ ದೇವಸ್ಥಾನವೆಂದರೆ ಅಲ್ಲಿನ ದೇವ/ದೇವತೆಗಾಗಿ ಪ್ರತಿಷ್ಠಾಪಿಸಲಾದ ಒಂದು ಪವಿತ್ರ ಮನೆ. ಅದು ಒಂದು ಪ್ರಾರ್ಥನೆಯ ಸ್ಥಳ ಮಾತ್ರ ಅಲ್ಲ. ವೇದ ಮಂತ್ರಗಳಿಂದ ದೇವ/ದೇವತೆಯನ್ನು ಅಲ್ಲಿ ಎಂದಿಗೂ ನೆಲೆಸಿರುವಂತೆ ಆಹ್ವಾನಿಸಿ ಪ್ರತಿಷ್ಠಾಪಿಸಲಾಗುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರು ದೇವರ ಮನೆಗೆ ಬಂದ ಅತಿಥಿಗಳಂತೆ, ಆದರೆ ಆ ಭೇಟಿಗೆ ದೇವರ ಆಹ್ವಾನವಿರಬೇಕು. ಆಗ ಆ ಭೇಟಿ ಒಂದು ತೀರ್ಥಯತ್ರೆಯಾಗುತ್ತದೆ. ಹಿಂದಿನ ಕಾಲದಲ್ಲಿ ಯಾತ್ರೆಗಳು ಸುದೀರ್ಘವಾಗಿರುತ್ತಿದ್ದವು. ನಮ್ಮ ಪೂರ್ವಜರು ಈ ಮಾತನ್ನು ಹೇಳುತ್ತಿದ್ದುದು ನಿಮಗೆ ನೆನಪಿರಬೇಕು – “ದೇವರ ಆಹ್ವಾನವಿದ್ದರೆ ಮಾತ್ರ ನಮಗೆ ಆ ಒಲವು ಬರುತ್ತದೆ ಮತ್ತು ಯಾತ್ರೆಗೆ ಹೋಗುತ್ತೇವೆ”.

ಭಾರತ ದೇವಾಲಯಗಳ ನಾಡು. ಇಲ್ಲಿ ಚಿಕ್ಕ ಮತ್ತು ದೊಡ್ಡದಾದ ದೇವಾಲಯಗಳು ದೇಶದ ಉದ್ದಗಲಕ್ಕೂ ಇವೆ. ಇದರಲ್ಲೂ ಹಲವಾರು ದೇವಸ್ಥಾನಗಳು ನೂರಾರು ಅಥವಾ ಸಾವಿರಾರು ವರ್ಷಗಳಷ್ಟು ಹಳೆಯವು. ಈ ಭವ್ಯ ದೇವಸ್ಥಾನಗಳು ಎಂಟನೆ ಶತಮಾನದಲ್ಲಿ ಮೊದಲುಗೊಂಡ ವಿದೇಶೀ ಆಕ್ರಮಣಕಾರರನ್ನು ಮೆಟ್ಟಿ ಇಂದಿಗೂ ನಿಂತಿವೆ. ಮೂರ್ತಿ ಪೂಜೆಯನ್ನು ದ್ವೇಷಿಸುತ್ತಿದ್ದ ಆಕ್ರಮಣಕಾರರು ಹಲವಾರು ದೇವಸ್ಥಾನಗಳನ್ನು ಕೆಡವಿ ನಾಶ ಮಾಡಿದರು. ಕೆಲವು ದೇವಸ್ಥಾನಗಳಲ್ಲಿ ಇರುವ ಮೂರ್ತಿಗಳಿಗೆ ತಲೆ, ಮೂಗು ಕಿವಿ ಹೀಗೆ ಹಲವು ಭಾಗಗಳನ್ನು ನಾಶ ಮಾಡಲಾಗಿದೆ. ಇಂತಹ ಆಕ್ರಮಣ ಹಿಂದೂಗಳ ಅಸ್ತಿತ್ವಕ್ಕೆ ಹೊಡೆತ ತರುವಂತಹ ಸೂಚನೆಗಳು. ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಮುಸ್ಲಿಂ ರಾಜರ ಕಾಲದಲ್ಲಿ ರಾಮ ಮಂದಿರ ನಾಶವಾಗಿದ್ದು ನಮಗೆಲ್ಲರಿಗೂ ಗೊತ್ತಿರುವ ವಿಷಯ.

ಭಾರತದಲ್ಲಿ ಚಿಕ್ಕ ಮಗುವೂ ಸಹ ಯಾವುದಾದರು ಒಂದು ಹೆಸರನ್ನು ಹೇಳಲು ಕಲಿಯುತ್ತದೆ ಎಂದರೆ ಆ ಹೆಸರು ರಾಮ್ (ಸಂಸ್ಕೃತದಲ್ಲಿ ರಾಮ). ಶ್ರೀರಾಮನನ್ನು ಮಹಾವಿಷ್ಣುವಿನ ಎಂಟನೆಯ ಅವತಾರವೆಂದು ಪೂಜಿಸುತ್ತಾರೆ. ಸೀತಾಮಾತೆ ಲಕ್ಷ್ಮಿಯ ಅವತಾರ. ಭಾರತದ ಉತ್ತರದಿಂದ ದಕ್ಷಿಣದವರೆಗೂ ಪೂರ್ವದಿಂದ ಪಶ್ಚಿಮದವರೆಗೂ ರಾಮ ಮತ್ತು ಸೀತೆಯ ಹೆಸರುಗಳನ್ನು ಭಕ್ತಿ, ಪ್ರೀತಿ ಮತ್ತು ಅಭಿಮಾನದಿಂದ ಬಳಸುತ್ತಾರೆ. ಭಾರತದ ಹೊರಗೂ ಆಗ್ನೇಯ ಏಷ್ಯಾ ದೇಶಗಳಲ್ಲಿ ಇಂದಿಗೂ ರಾಮಾಯಣ, ರಾಮ-ಸೇತೆಯ ಜೀವನ ಕಥೆಯನ್ನು ಸಂಗೀತ, ನಾಟಕ, ನೃತ್ಯ, ಕಲೆ ಮತ್ತು ಶಿಲ್ಪಗಳ ಮೂಲಕ ಹೇಳುತ್ತಾರೆ.

ಒಂದು ಸಿನಿಮಾ ಒಳ್ಳೆಯ ಯಶಸ್ಸು ಪಡೆದರೆ, ನಾವು ಆ ಸಿನೆಮಾ ಚಿತ್ರೀಕರಿಸಿದ ಸ್ಥಳಕ್ಕೆ ಹೋಗಬೇಕೆಂದು ಆಸೆ ಪಡುತ್ತೇವೆ. ಒಂದು ಕಾಲ್ಪನಿಕ ಕಥೆಯ ಮೂಲ ಸ್ಥಳಕ್ಕೆ ಹೋಗಿ ವೀಕ್ಷಿಸಲು ಬಹಳಷ್ಟು ಖರ್ಚು ಮಾಡುತ್ತೇವೆ. ಇಂತಹ ಆಕರ್ಷಕ ಸ್ಥಳಗಳನ್ನು ಇಂದು ಪ್ರಪಂಚದಾದ್ಯಂತ ನಾವು ಕಾಣಬಹುದು.

ಭಾರತ ರಾಮಾಯಣದ ನೆಲೆ. ರಾಮಾಯಣ ಪ್ರಪಂಚದ ಸಾಹಿತ್ಯ ಜಗತ್ತಿನಲ್ಲಿ ಅತಿದೊಡ್ಡ ಕಥೆ. ರಾಮಾಯಣ ಒಂದು ಆಧ್ಯಾತ್ಮಿಕ ನಾಯಕತ್ವದ ಮಹತ್ವವಾದ ಕಥೆ. ಅಂದಿನ ಕಾಲಕ್ಕೆ ಪ್ರಸ್ತುತವಿದ್ದ ರಾಮಾಯಣದ ಸತ್ಯ ಅಂಶಗಳು ಇಂದಿಗೂ ಅಷ್ಟೇ ಪ್ರಸ್ತುತವೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ರಾಮಾಯಣ ಭಾರತದ ಇತಿಹಾಸದ ಒಂದು ಮುಖ್ಯವಾದ ಭಾಗ ಮತ್ತು ಸಮಕಾಲೀನ ದೃಷ್ಟಿಕೋನವನ್ನು ಪ್ರೇರೇಪಿಸಿವ ಸಾಮರ್ಥ್ಯ ಹೊಂದಿದೆ. ರಾಮಾಯಣದಲ್ಲಿ ಉಲ್ಲೇಖಿಸಲಾದ ಬಹಳಷ್ಟು ಸ್ಥಳಗಳು ಇಂದಿನ ಭಾರತಲ್ಲಿ ಇವೆ. ಅದರಲ್ಲಿ ರಾಮ ಜನ್ಮಭೂಮಿ ಆಯೋಧ್ಯೆಯೂ ಒಂದು. ರಾಮ ಜನ್ಮಭೂಮಿಯಲ್ಲಿ ಎಲ್ಲಾ ಧರ್ಮದವರೂ ಒಮ್ಮತದಿಂದ ಭವ್ಯ ಮಂದಿರ ನಿರ್ಮಿಸಬೇಕು, ಏಕೆಂದರೆ ನಮ್ಮ ಇತಿಹಾಸದ ಅತ್ಯುತ್ತಮ ಕಥೆ ಮತ್ತು ನಾಗರಿಕತೆ ಪ್ರಾರಂಭಗೊಂಡಿದ್ದೇ ಇಲ್ಲಿ.

ನಾವು ಇಂದು ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಒಮ್ಮತ ಮೂಡಿಸುವಲ್ಲಿ ವಿಫಲವಾಗಿದ್ದೇವೆ. ತನ್ನ ಪುರಾತನ ಪವಿತ್ರ ಸ್ಥಳಗಳನ್ನು ಉಳಿಸಿಕೊಳ್ಳಲಾಗದ ದೇಶ ಅಡಿಪಾಯ ಇಲ್ಲದ ಮನೆಯಂತೆ. ಸಂಸ್ಥೆಗಳು, ಮನೆಗಳು, ವಾಣಿಜ್ಯ ಕೇಂದ್ರಗಳು ಎಷ್ಟು ಮುಖ್ಯವೋ ಹಾಗೆಯೇ ಒಂದು ದೇಶಕ್ಕೆ ತನ್ನ ನಾಗರಿಕತೆಯ ಘನತೆಯನ್ನು ಎತ್ತಿಹಿಡಿದ ಸ್ಥಳಗಳೂ ಅಷ್ಟೇ ಮುಖ್ಯ. ಭಾರತದ ಕಲೆ ಮತ್ತು ಸಂಸ್ಕೃತಿಗೆ ರಾಮಾಯಣದ ಘಟನೆಗಳಲ್ಲಿ ಮೂಲವಿದೆ. ನಮಗೆ ಇಂದು ಇಂತಹ ಸ್ಥಳಗಳು ಪರಿಚಿತವಾಗಿರುವುದು ನಮ್ಮ ಅದೃಷ್ಟವೇ ಸರಿ. ನಾವು ಇಂತಹ ಸ್ಥಳಗಳ ಕನಿಷ್ಠ ಪ್ರಾಮುಖ್ಯತೆ ಮತ್ತು ನೆನಪು ಉಳಿಸಿಕೊಳ್ಳುವುದರಲ್ಲಿ ವಿಫಲವಾಗಿದ್ದೇವೆಂದರೆ ಇಂದಿನ ಕರುಣಾಜನಕ ಸ್ಥಿತಿ ತೋರಿಸುತ್ತದೆ.

Ram Mandir Ram Sita Lakshman Hanuman

ಮೂಲ – ಪಿನ್ಟರೆಸ್ಟ್

ಭಾರತದ ನಗರಗಳಲ್ಲಿ ವಾಸಿಸುವ ಬಹಳಷ್ಟು ಜನ ಇಂದು ದೇವಸ್ಥಾನಗಳಿಂದ ದೂರ ಹೋಗುತ್ತಿದ್ದಾರೆ. ಇಂದಿನ ನಗರವಾಸಿಗಳಿಗೆ ರಾಮ ಮಂದಿರ ದೂರದ ವಿಷಯ ಮತ್ತು ಲೆಕ್ಕವಿಲ್ಲದ ಸಮಾಚಾರ. ಆದರೂ ಪ್ರತಿಯೊಂದು ಮನೆಯಲ್ಲೂ ಒಂದು ಚಿಕ್ಕದಾದ ದೇವರ ಕೋಣೆ ಇರುತ್ತದೆ, ಅಲ್ಲಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತೇವೆ. ನಾವು ದೇವರ ಕೋಣೆಗಳನ್ನು ಬಲವಂತದಿಂದ ಮಾಡುವುದಿಲ್ಲ. ನಮಗೆ ತಿಳಿಯದೆ ನಮ್ಮಲ್ಲಿ ಪವಿತ್ರತೆಯ ಕಡೆ ಎಳೆಯುವ ಒಳ ಮನಸ್ಸಿದೆ. ನಮ್ಮ ಹೊರಗಿನ ಪ್ರಪಂಚ ನಮ್ಮ ಒಳಗಿನ ಆಧ್ಯಾತ್ಮದ ಜೊತೆಗಿದೆ ಎಂಬುದರ ಅರಿವಿದೆ. ದೇವ ದೇವತೆ ಮತ್ತು ಗುರುಗಳಿಗೆ ಗೌರವ ಭಕ್ತಿಯಿಂದ ಪ್ರಾರ್ಥಿಸುತ್ತೇವೆ.

ಲಕ್ಷಾಂತರ ಜನರಿಗೆ ಸಾವಿರಾರು ವರ್ಷಗಳಿಂದ ರಾಮ ಮತ್ತು ಸೀತೆಯರ ನಾಮ ಜಪ, ಧ್ಯಾನ, ನೃತ್ಯ, ಮತ್ತು ಭಜನೆ ಆಂತರಿಕ ಆನಂದ ಮತ್ತು ಪ್ರಶಾಂತತೆ ಕೊಡುತ್ತಾ ಬಂದಿವೆ. ವೈದಿಕ ಸಂಪ್ರದಾಯದಲ್ಲಿ ಮುಕ್ತಿ ಅತ್ಯಂತ ಪ್ರಮುಖವಾದುದು ಮತ್ತು ಕೊನೆಯ ಗುರಿ. ಈ ಪ್ರಯಾಣದಲ್ಲಿ ಸೀತಾರಾಮ ಎಂಬ ನಾಮಕ್ಕೆ ಮುಕ್ತಿಯ ಕಡೆಗೆ ಕೊಂಡೊಯ್ಯಬಲ್ಲ ಶಕ್ತಿಯಿದೆ.

ಆದ್ದರಿಂದ ಶ್ರೀರಾಮನ ಜನ್ಮಸ್ಥಳದಲ್ಲಿ ಒಂದು ಅದ್ಬುತವಾದ ದೇವಸ್ಥಾನವನ್ನು ಕಟ್ಟುವುದು ನಮ್ಮ ಸಂಸ್ಕೃತಿಗೆ ನಾವು ಸಲ್ಲಿಸುವ ಅತ್ಯುನ್ನತ ಗೌರವವಾಗಿದೆ. ಪ್ರಪಂಚದ ಎಲ್ಲಾ ಕಡೆಗಳಿಂದ ಭಕ್ತರು ತಮ್ಮ ಮೂಲದೇವರು ಎಂದು ಭಾವಿಸುವ ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸುವುದನ್ನು ಒಮ್ಮೆ ಊಹಿಸಿಕೊಳ್ಳಿ.

ಭಾರತ ಶತಮಾನಗಳಿಂದ ಪ್ರಪಂಚಕ್ಕೆ ಸನಾತನ ಧರ್ಮದ ವಿಜ್ಞಾನ ಮತ್ತು ತತ್ವಜ್ಞಾನಗಳನ್ನೂ ಬೋಧಿಸುತ್ತಾ ಬಂದಿದೆ. ಅಂತಹ ಅತ್ಯುನ್ನತ ಜ್ಞಾನ ದೇಗುಲಗಳಿಗೆ ನಮ್ಮ ಗೌರವ ಮತ್ತು ಪ್ರಾಮುಖ್ಯತೆ ಕೊಡುವ ಸಮಯ ಬಂದಿದೆ

The article has been translated from English into Kannada by Hemanth Kumar

Featured Image: Amar Ujala

Disclaimer: The opinions expressed within this article are the personal opinions of the author. IndiaFacts does not assume any responsibility or liability for the accuracy, completeness, suitability, or validity of any information in this article.